ಸಾರಾಂಶ
ದುಬೈ: ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡುವುದಕ್ಕಾಗಿ ಭಾರತ ತಂಡದ ಆಟಗಾರರು ಫೆ.15ರಂದು ದುಬೈಗೆ ಪ್ರಯಾಣಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಭಾರತ ಸದ್ಯ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಆಡುತ್ತಿದೆ.
ಫೆ.12ಕ್ಕೆ ಸರಣಿ ಕೊನೆಗೊಳ್ಳಲಿದೆ. ಸರಣಿಯ ಮೂರು ದಿನಗಳ ಬಳಿಕ ಭಾರತದ ಆಟಗಾರರು ದುಬೈಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಭಾರತ ತಂಡ ಈ ಬಾರಿ ಟೂರ್ನಿಗೂ ಮುನ್ನ ಯಾವುದೇ ಅಭ್ಯಾಸ ಪಂದ್ಯ ಆಡುವುದಿಲ್ಲ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಐಸಿಸಿ ಟೂರ್ನಿಗೆ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯ ಆಡಲಿದೆ. ಆದರೆ ನಿರಂತರ ಕ್ರಿಕೆಟ್‌ನಿಂದಾಗಿ ಈ ಬಾರಿ ಭಾರತಕ್ಕೆ ಯಾವುದೇ ಅಭ್ಯಾಸ ಪಂದ್ಯ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.ಟೂರ್ನಿಯ ಆತಿಥ್ಯ ಹಕ್ಕು ಪಾಕಿಸ್ತಾನ ಬಳಿ ಇದ್ದರೂ ಭಾರತ ತಂಡ ಪಾಕ್‌ಗೆ ಹೋಗಲು ನಿರಾಕರಿಸಿದ್ದರಿಂದ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಫೆ.20ಕ್ಕೆ ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯವಾಡಲಿದೆ. ಫೆ.23ಕ್ಕೆ ಬದ್ಧವೈರಿ ಪಾಕಿಸ್ತಾನ, ಮಾ.2ಕ್ಕೆ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.