ಸಾರಾಂಶ
ಬೆಂಗಳೂರು: ಜಪಾನ್‌ನಲ್ಲಿ ಆಗಸ್ಟ್ 1ರಿಂದ ವಿಶ್ವ ಕರಾಟೆ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದ್ದು, ಭಾರತದ ಒಟ್ಟು 40 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಕ್ರೀಡಾಪಟುಗಳಿಗೆ, ದೇಶದ ಅತಿ ದೊಡ್ಡ ಕರಾಟೆ ಶಾಲೆ ಎಂದೇ ಖ್ಯಾತಿ ಹೊಂದಿರುವ ಓಎಸ್‌ಕೆ ಫೆಡರೇಷನ್ ಆಫ್ ಇಂಡಿಯಾದಲ್ಲಿ ಭಾನುವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಭಾರತವನ್ನು ಪ್ರತಿನಿಧಿಸಿ ಒಟ್ಟು 40 ಮಂದಿ ಸ್ಪರ್ಧಾಳುಗಳು ಜಪಾನ್‌ನ ಓಕಿನೋವಾಗೆ ತೆರಳಲಿದ್ದು, ವಿಶ್ವದ ಅನೇಕ ರಾಷ್ಟ್ರಗಳ ಕ್ರೀಡಾಪಟುಗಳು ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
4 ವರ್ಷಗಳಿಗೊಮ್ಮೆ ನಡೆಯುವ ಈ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತ 2ನೇ ಬಾರಿ ಪಾಲ್ಗೊಳ್ಳುತ್ತಿದೆ. ಕಳೆದ ಬಾರಿ ಭಾರತ 8ನೇ ಸ್ಥಾನವನ್ನು ಅಲಂಕರಿಸಿತ್ತು. ಈ ಬಾರಿ ಟೂರ್ನಿಗೆ ಕಳೆದೊಂದು ವರ್ಷದಿಂದ ಕಠಿಣ ಅಭ್ಯಾಸ ನಡೆಸಿರುವ ಭಾರತ ತಂಡ ಮೊದಲ ಸ್ಥಾನ ಅಲಂಕರಿಸುವ ವಿಶ್ವಾಸದಲ್ಲಿದೆ.
ಭಾನುವಾರ ನಗರದ ಜೆ.ಪಿ.ನಗರದಲ್ಲಿ ನಡೆದ ಬೀಳ್ಗೊಡುಗೆ ಸಮಾರಂಭಕ್ಕೆ ಆಗಮಿಸಿದ್ದ ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ಮಮತಾ ಪೂಜಾರಿ, ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಮುನ್ನ ಮಾಡಿಕೊಳ್ಳಬೇಕಾದ ಮಾನಸಿಕ ತಯಾರಿಗಳ ಬಗ್ಗೆ ಸ್ಪರ್ಧಾಳುಗಳಿಗೆ ಮಾರ್ಗದರ್ಶನ ನೀಡಿದರು.
ಜೊತೆಗೆ ಪ್ಯಾರಾಲಿಂಪಿಕ್ಸ್ ಈಜುಪಟು, ಕನ್ನಡಿಗ ವಿಶ್ವಾಸ್ ಮಾತನಾಡಿ, ಸವಾಲುಗಳ ಬಗ್ಗೆ ಸ್ಪರ್ಧಾಳುಗಳಿಗೆ ಮನವರಿಗೆ ಆತ್ಮಸ್ಥೈರ್ಯ ತುಂಬಿದರು. ಅಧ್ಯಕ್ಷ ಸುರೇಶ್ ಕೆಣಿಚಿರಾ ಮಾತನಾಡಿ, ಕಳೆದೊಂದು ವರ್ಷದಿಂದ ಕ್ರೀಡಾಪಟುಗಳು ಪಟ್ಟ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಜಪಾನ್‌ನಲ್ಲಿ ಆಗಸ್ಟ್ 1ರಿಂದ ವಿಶ್ವ ಕರಾಟೆ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದ್ದು, ಆ.14ರಂದು ಮುಕ್ತಾಯಗೊಳ್ಳಲಿದೆ.