ಸಾರಾಂಶ
ನವದೆಹಲಿ: ವಿಶ್ವಕಪ್ ವೇಳೆ ಕಾಣಿಸಿಕೊಂಡಿದ್ದ ಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಭಾರತದ ತಾರಾ ವೇಗಿ ಮೊಹಮದ್ ಶಮಿ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.33ರ ಶಮಿ ಕೊನೆ ಬಾರಿ ಕಳೆದ ನವೆಂಬರ್‌ನಲ್ಲಿ ಭಾರತದ ಪರ ವಿಶ್ವಕಪ್ ಫೈನಲ್ ಆಡಿದ್ದರು. ಭಾರತ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಕಾಲಿನ ಗಾಯ ಲೆಕ್ಕಿಸದೆ ಟೂರ್ನಿಯಲ್ಲಿ ಆಡಿ 24 ವಿಕೆಟ್ ಪಡೆದಿದ್ದರು. ಇತ್ತೀಚೆಗಷ್ಟೇ ಅವರು ಲಂಡನ್‌ಗೆ ತೆರಳಿ ವಿಶೇಷ ಚುಚ್ಚುಮದ್ದು ಪಡೆದಿದ್ದರು. ‘3 ವಾರಗಳ ನಂತರ ನಿಧಾನವಾಗಿ ಓಡಬಹುದು ಎಂದು ವೈದ್ಯರು ತಿಳಿಸಿದ್ದರು. ಆದರೆ ಚುಚ್ಚುಮದ್ದು ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಶೀಘ್ರ ಅವರು ಇಂಗ್ಲೆಂಡ್‌ಗೆ ತೆರಳಲಿದ್ದಾರೆ’ ಬಿಸಿಸಿಐ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಅಲಭ್ಯರಾಗಿರುವ ಶಮಿ, ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಗುಣಮುಖರಾಗುವ ನಿರೀಕ್ಷೆಯಿದೆ.