ಸಾರಾಂಶ
ಸಿಡ್ನಿ: ಭಾರತ ತಂಡದ ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್‌ನ 2ನೇ ದಿನವಾದ ಶನಿವಾರ ಅವರ ಭೋಜನ ವಿರಾಮದ ಬಳಿಕ ಮೈದಾನಕ್ಕಿಳಿಯಲಿಲ್ಲ. ತಂಡದ ಫಿಸಿಯೋ ಹಾಗೂ ವೈದ್ಯಕೀಯ ಸಿಬ್ಬಂದಿಯ ಸಲಹೆ ಮೇರೆಗೆ ಕ್ರೀಡಾಂಗಣದಿಂದ ಹೊರನಡೆದ ಬೂಮ್ರಾ, ಸ್ಕ್ಯಾನ್‌ಗೆ ತೆರಳಿದರು ಎಂದು ತಿಳಿದುಬಂದಿದೆ. ಅದರ ವರದಿ ಇನ್ನೂ ಬಹಿರಂಗಗೊಂಡಿಲ್ಲ.
ದಿನದಾಟದ ಮುಕ್ತಾಯದ ಬಳಿಕ ವೇಗಿ ಪ್ರಸಿದ್ಧ್ ಕೃಷ್ಣ, ಬೂಮ್ರಾ ಬೆನ್ನು ನೋವಿನಿಂದ ಬಳಲುತ್ತಿರುವ ವಿಚಾರವನ್ನು ಪ್ರಸಾರಕರಿಗೆ ತಿಳಿಸಿದರು. ಬೂಮ್ರಾ ಅನುಪಸ್ಥಿತಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದರು.
ಬೂಮ್ರಾ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲಿದ್ದಾರೆ ಎಂದು ತಿಳಿಸಿರುವ ತಂಡದ ಆಡಳಿತದ ಮೂಲಗಳು, ಅವರು ಬೌಲ್ ಮಾಡುವ ಕುರಿತು ಭಾನುವಾರ ಬೆಳಗ್ಗೆ ನಿರ್ಧರಿಸುವುದಾಗಿ ತಿಳಿಸಿವೆ.
ಬೂಮ್ರಾ ಈ ಹಿಂದೆಯೂ ಬೆನ್ನು ನೋವಿನಿಂದ ಬಳಲಿದ್ದರು. ಇದೇ ಸಮಸ್ಯೆಯಿಂದಾಗಿ 2022ರಿಂದ 2023ರ ನಡುವೆ 1 ವರ್ಷ ಕಾಲ ಅವರು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಇದೀಗ, ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿರುವ ಕಾರಣ, ಭಾರತ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಆತಂಕ ಶುರುವಾಗಿದೆ.