2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ತಾರಾ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಗಾಯಗೊಂಡಿದ್ದಾರೆ.

ವಿಶಾಖಪಟ್ಟಣಂ: 2ನೇ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ ಭಾರತದ ತಾರಾ ಬ್ಯಾಟರ್‌ ಶುಭ್‌ಮನ್‌ ಗಿಲ್‌ ಗಾಯಗೊಂಡಿದ್ದಾರೆ. ಈಗಾಗಲೇ ಕೆಲ ಆಟಗಾರರು ಗಾಯದಿಂದಾಗಿ ಪಂದ್ಯಕ್ಕೆ ಅಲಭ್ಯರಾಗಿದ್ದು, ಈ ನಡುವೆ ಗಿಲ್ ಕೂಡಾ ಗಾಯಗೊಂಡಿದ್ದರಿಂದ ಭಾರತಕ್ಕೆ 3ನೇ ಟೆಸ್ಟ್‌ಗೂ ಮುನ್ನ ಆತಂಕ ಶುರುವಾಗಿದೆ.

ಭಾನುವಾರ ಫೀಲ್ಡಿಂಗ್ ವೇಳೆ ಗಿಲ್‌ ಕೈ ಬೆರಳಿಗೆ ಗಾಯವಾಗಿದೆ. ಹೀಗಾಗಿ ಅವರು ಸೋಮವಾರ ಮೈದಾನಕ್ಕೆ ಬರಲಿಲ್ಲ. ಅವರ ಬದಲು ಸರ್ಫರಾಜ್‌ ಖಾನ್‌ ಫೀಲ್ಡಿಂಗ್‌ ಮಾಡಿದರು. 

ಗಿಲ್ ಈಗಾಗಲೇ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ಕೆಲ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಫೆ.15ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೂ ಮುನ್ನ ಫಿಟ್‌ ಆಗುವ ನಿರೀಕ್ಷೆಯಿದೆ. ಕೆ.ಎಲ್‌.ರಾಹುಲ್‌, ರವೀಂದ್ರ ಜಡೇಜಾ ಗಾಯದಿಂದಾಗಿ 2ನೇ ಪಂದ್ಯಕ್ಕೆ ಗೈರಾಗಿದ್ದರು.