ಲಖನೌ ಸೂಪರ್‌ ಜೈಂಟ್ಸ್‌ ಪ್ಲೇ-ಆಫ್‌ ಕನಸು ಭಗ್ನ. ಡೆಲ್ಲಿ ವಿರುದ್ಧ ಎದುರಾಯ್ತು 19 ರನ್‌ ಸೋಲು. ಕೆ.ಎಲ್‌.ರಾಹುಲ್‌ ಪಡೆಗೆ ತೀವ್ರ ನಿರಾಸೆ. ಲಖನೌಗೆ ಸಿಗದ ಲಕ್‌, ಆರ್‌ಸಿಬಿಗೆ ಸಿಗುತ್ತಾ?

ನವದೆಹಲಿ: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಪ್ಲೇ-ಆಫ್‌ ಪ್ರವೇಶಿಸುವ ಅದೃಷ್ಟ ಸಿಕ್ಕರೂ ಸಿಗಬಹುದು. ಪಂದ್ಯದಿಂದ ಪಂದ್ಯಕ್ಕೆ ಪ್ರತಿಸ್ಪರ್ಧಿಗಳು ಕಡಿಮೆಯಾಗುತ್ತಿದ್ದು, ಆರ್‌ಸಿಬಿಯ ಹಾದಿ ಸುಗಮಗೊಳ್ಳುತ್ತಿದೆ. 

ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 19 ರನ್‌ಗಳಿಂದ ಲಖನೌ ಸೂಪರ್‌ ಜೈಂಟ್ಸ್‌ ಸೋಲುಂಡಿದ್ದರಿಂದ ಆರ್‌ಸಿಬಿಯ ಪ್ಲೇ-ಆಫ್‌ ಲೆಕ್ಕಾಚಾರ ಮತ್ತಷ್ಟು ಸರಳವಾಗಿದೆ. ಮಂಗಳವಾರ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿತು. ಮೊದಲ ಓವರಲ್ಲೇ ಜೇಕ್‌ ಫ್ರೇಸರ್‌ (0) ವಿಕೆಟ್‌ ಕಳೆದುಕೊಂಡರೂ, ಅಭಿಷೇಕ್‌ ಪೊರೆಲ್‌ (58) ಹಾಗೂ ಟ್ರಿಸ್ಟನ್‌ ಸ್ಟಬ್ಸ್‌(57*)ರ ಅರ್ಧಶತಕಗಳು ಡೆಲ್ಲಿಗೆ ನೆರವಾಯಿತು.

ಬೃಹತ್‌ ಮೊತ್ತ ಬೆನ್ನತ್ತಿದ ಲಖನೌ 44 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಿಕೋಲಸ್‌ ಪೂರನ್‌ (61), ಅರ್ಷದ್‌ ಖಾನ್‌ (58*)ರ ಹೋರಾಟ ತಂಡದ ಗೆಲುವಿನ ಸಾಕಾಗಲಿಲ್ಲ.

ಸ್ಕೋರ್‌: ಡೆಲ್ಲಿ 20 ಓವರಲ್ಲಿ 208/4 (ಪೊರೆಲ್‌ 58, ಸ್ಟಬ್ಸ್‌ 57*, ನವೀನ್‌ 2-51), ಲಖನೌ 20 ಓವರಲ್ಲಿ 189/9 (ಪೂರನ್‌ 61, ಅರ್ಷದ್‌ 58, ಇಶಾಂತ್‌ 3-34) ಪಂದ್ಯಶ್ರೇಷ್ಠ: ಇಶಾಂತ್‌ ಶರ್ಮಾ

ಪ್ಲೇ-ಆಫ್‌: 2 ಸ್ಥಾನ, 3 ತಂಡಗಳ ಸ್ಪರ್ಧೆ!

ಕೆಕೆಆರ್‌ ಹಾಗೂ ರಾಜಸ್ಥಾನ ಅಧಿಕೃತವಾಗಿ ಪ್ಲೇ-ಆಫ್‌ಗೆ ಪ್ರವೇಶಿಸಿದ್ದು, ಇನ್ನೆರಡು ಸ್ಥಾನಗಳಿಗೆ ಸನ್‌ರೈಸರ್ಸ್‌, ಆರ್‌ಸಿಬಿ, ಚೆನ್ನೈ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಡೆಲ್ಲಿ ಸದ್ಯಕ್ಕೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿ ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರೂ, ತಂಡ ಗಣಿತೀಯವಾಗಷ್ಟೇ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದಿದೆ. ಸನ್‌ರೈಸರ್ಸ್‌ ತನ್ನ ಕೊನೆಯ 2 ಪಂದ್ಯಗಳಲ್ಲಿ ಒಟ್ಟಾರೆ 194 ರನ್‌ (ಎರಡೂ ಪಂದ್ಯಗಳಲ್ಲಿ 200 ರನ್‌ ಬೆನ್ನತ್ತಿ)ಗಳಿಂದ ಸೋತರೆ, ಆಗ ಡೆಲ್ಲಿಯ ನೆಟ್‌ ರನ್‌ರೇಟ್‌ ಸನ್‌ರೈಸರ್ಸ್‌ನ ನೆಟ್ ರನ್‌ರೇಟ್‌ಗಿಂತ ಹೆಚ್ಚಾಗಲಿದೆ.

ಇನ್ನು ಲಖನೌ 7ನೇ ಸ್ಥಾನದಲ್ಲೇ ಉಳಿದಿದ್ದು, ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಬೃಹತ್‌ ಅಂತರದಲ್ಲಿ ಗೆದ್ದರೂ ಅಗ್ರ-4ರಲ್ಲಿ ಸ್ಥಾನ ಪಡೆಯುವುದು ಕಷ್ಟ. ಆರ್‌ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ 18 ರನ್‌ ಅಥವಾ 18.1 ಓವರಲ್ಲಿ ಗೆದ್ದರೆ ನೆಟ್‌ ರನ್‌ರೇಟ್‌ ಚೆನ್ನೈಗಿಂತ ಉತ್ತಮಗೊಳ್ಳಲಿದ್ದು, ಸನ್‌ರೈಸರ್ಸ್‌ ತನ್ನ ಕೊನೆಯ 2 ಪಂದ್ಯಗಳನ್ನು ಗೆದ್ದರೂ ಆರ್‌ಸಿಬಿಗೆ ಸಮಸ್ಯೆಯಿಲ್ಲ. ಒಂದು ವೇಳೆ ಸನ್‌ರೈಸರ್ಸ್‌ ತನ್ನ 2 ಪಂದ್ಯಗಳಲ್ಲಿ ಸೋತರೆ, ಆಗ ಆರ್‌ಸಿಬಿ ಹಾಗೂ ಚೆನ್ನೈ ಎರಡೂ ತಂಡಗಳಿಗೆ ಪ್ಲೇ-ಆಫ್‌ಗೇರಲು ಅವಕಾಶ ಇರಲಿದೆ.