ಐಪಿಎಲ್ ವಿದೇಶಕ್ಕೆ ಸ್ಥಳಾಂತರವಿಲ್ಲ: ಎಲ್ಲಾ ಪಂದ್ಯಗಳಿಗೂ ಭಾರತ ಆತಿಥ್ಯ

| Published : Mar 17 2024, 01:47 AM IST / Updated: Mar 17 2024, 12:06 PM IST

ಸಾರಾಂಶ

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ನಡುವೆ ಚುನಾವಣೆ ಕಾರಣದಿಂದ ಐಪಿಎಲ್‌ನ 2ನೇ ಭಾಗ ದುಬೈಗೆ ಸ್ಥಳಾಂತರಗೊಳ್ಳಬಹುದು ಎಂದು ವರದಿಯಾಗಿತ್ತು.

ನವದೆಹಲಿ: ಲೋಕಸಭೆ ಚುನಾವಣೆ 7 ಹಂತಗಳಲ್ಲಿ ನಡೆಯಲಿರುವ ಕಾರಣ 17ನೇ ಆವೃತ್ತಿ ಐಪಿಎಲ್‌ನ 2ನೇ ಚರಣ ವಿದೇಶಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ವದಂತಿಗಳನ್ನು ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಳ್ಳಿ ಹಾಕಿದ್ದಾರೆ. 

ಚುನಾವಣೆ ನಡುವೆಯೂ ಐಪಿಎಲ್‌ನ ಎಲ್ಲಾ ಪಂದ್ಯಗಳಿಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಶನಿವಾರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ನಡುವೆ ಚುನಾವಣೆ ಕಾರಣದಿಂದ ಐಪಿಎಲ್‌ನ 2ನೇ ಭಾಗ ದುಬೈಗೆ ಸ್ಥಳಾಂತರಗೊಳ್ಳಬಹುದು ಎಂದು ವರದಿಯಾಗಿತ್ತು. 

ಈಗಾಗಲೇ ಬಿಸಿಸಿಐ ಅಧಿಕಾರಿಗಳು ದುಬೈಗೆ ತೆರಳಿದ್ದು, ಪಂದ್ಯ ಆಯೋಜನೆ ಬಗ್ಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದನ್ನು ಅರುಣ್‌ ಅವರು ನಿರಾಕರಿಸಿದ್ದಾರೆ. ‘ಯಾವುದೇ ಪಂದ್ಯ ಭಾರತದಿಂದ ಸ್ಥಳಾಂತರಗೊಳ್ಳುವುದಿಲ್ಲ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಮಾ.22ರಿಂದ ಏ.7ರ ವರೆಗೂ 21 ಪಂದ್ಯಗಳು ನಡೆಯಲಿವೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಹಾಗೂ ಆರ್‌ಸಿಬಿ ತಂಡಗಳು ಚೆನ್ನೈನಲ್ಲಿ ಮುಖಾಮುಖಿಯಾಗಲಿವೆ.