ಐಪಿಎಲ್‌ ಸಭೆಯಲ್ಲಿ ಭಾರಿ ಗಲಾಟೆ. ಕೆಕೆಆರ್‌ ಮಾಲಿಕ ಶಾರುಖ್‌ ಖಾನ್‌ ಜೊತೆ ಪಂಜಾಬ್‌ ಕಿಂಗ್ಸ್‌ ಮಾಲಿಕ ನೆಸ್‌ ವಾಡಿಯಾ ಮಾತಿನ ಚಕಮಕಿ. ಮೆಗಾ ಹರಾಜಿಗೆ ಒಪ್ಪದ ಶಾರುಖ್‌, ಹರಾಜು ನಡೆಸಲೇಬೇಕು ಎಂದು ವಾಡಿಯಾ ಪಟ್ಟು.

ಮುಂಬೈ: 2025ರ ಐಪಿಎಲ್‌ಗೂ ಮುನ್ನ ನಡೆಯಬೇಕಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬಗ್ಗೆ ತಂಡಗಳ ಮಾಲಿಕರ ನಡುವೆ ಒಮ್ಮತ ಮೂಡಿಬಂದಿಲ್ಲ. ಹರಾಜಿನ ರೂಪುರೇಷೆ ಸಿದ್ಧಪಡಿಸುವ ಸಲುವಾಗಿ ಮಾಲಿಕರ ಜೊತೆ ಬುಧವಾರ ತನ್ನ ಕೇಂದ್ರ ಕಚೇರಿಯಲ್ಲಿ ಬಿಸಿಸಿಐ ಸಭೆ ಆಯೋಜಿಸಿತ್ತು.

ಈ ವೇಳೆ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ಮಾಲಿಕ ಶಾರುಖ್‌ ಖಾನ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಮಾಲಿಕ ನೆಸ್‌ ವಾಡಿಯಾ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

ಮೆಗಾ ಹರಾಜು ನಡೆಸುವುದು ಬೇಡ. ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಬೇಕಿರುವ ಕೆಲ ಆಟಗಾರರನ್ನಷ್ಟೇ ಬದಲಿಸಿಕೊಳ್ಳಲು ಮಿನಿ ಹರಾಜು ನಡೆಸಿದರೆ ಸಾಕು ಎಂದು ಶಾರುಖ್‌ ಹೇಳಿದರು ಎನ್ನಲಾಗಿದ್ದು, ಇದನ್ನು ವಿರೋಧಿಸಿದ ವಾಡಿಯಾ, ಮೆಗಾ ಹರಾಜು ನಡೆಯಬೇಕು.

4ಕ್ಕಿಂತ ಹೆಚ್ಚು ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಿಡಬಾರದು ಎಂದು ವಾದಿಸಿದರು ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು ಎಂದು ವರದಿಯಾಗಿದೆ.