ಮಿರಾಕಲ್‌: ಪ್ಲೇ-ಆಫ್‌ಗೆ ನುಗ್ಗಿದ ಆರ್‌ಸಿಬಿ!

| Published : May 19 2024, 01:46 AM IST / Updated: May 19 2024, 04:25 AM IST

ಸಾರಾಂಶ

ಆರ್‌ಸಿಬಿ ಪ್ಲೇ-ಆಫ್‌ಗೆ ಲಗ್ಗೆ. ಚೆನ್ನೈ ವಿರುದ್ಧ ರೋಚಕ ಗೆಲುವು. ಪವಾಡ ಮಾಡಿದ ರಾಯಲ್‌ ಚಾಲೆಂಜರ್ಸ್‌. ಸತತ 6 ಪಂದ್ಯ ಸೋತು, ಬಳಿಕ ಸತತ 6 ಗೆಲುವು ದಾಖಲಿಸಿ ಪ್ಲೇ-ಆಫ್‌ಗೆ ಪ್ರವೇಶ.

ನಾಸಿರ್‌ ಸಜಿಪ 

ಬೆಂಗಳೂರು   :  ವಿರಾಟ್‌ ಕೊಹ್ಲಿ ಹೇಳಿದಂತೆಯೇ ‘ಆರ್‌ಸಿಬಿಯ ಹೊಸ ಅಧ್ಯಾಯ’ ಆರಂಭವಾಗಿದೆ. ಅಪಾರ ಪ್ರಮಾಣದ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಯಂತೆಯೇ ಆರ್‌ಸಿಬಿ 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ್ದು, ಹಾಲಿ ಚಾಂಪಿಯನ್‌ ಚೆನ್ನೈನ ನಾಕೌಟ್ ಕನಸು ಭಗ್ನಗೊಂಡಿದೆ. ಮಳೆರಾಯ ಕೃಪೆ ತೋರಿ, ಬ್ಯಾಟರ್‌ಗಳು, ಬೌಲರ್‌ಗಳೆಲ್ಲಾ ಒಟ್ಟಾಗಿ ಹೋರಾಡಿ, ಆರ್‌ಸಿಬಿಯನ್ನು ಪ್ಲೇ-ಆಫ್‌ಗೇರಿಸಿದ್ದಾರೆ. ಮೊದಲ 8 ಪಂದ್ಯಗಳಲ್ಲಿ ಬರೋಬ್ಬರಿ 7ರಲ್ಲಿ ಸೋತಿದ್ದ ಆರ್‌ಸಿಬಿ ಮತ್ತೆ ಜಯ ಕಾಣಲು ಒಂದು ತಿಂಗಳು ಬೇಕಾಗಿತ್ತು. ಆದರೆ ಅದೊಂದು ಜಯ ಸಿಕ್ಕ ಮೇಲೆ ತಂಡ ಹಿಂದಿರುಗಿ ನೋಡೇ ಇಲ್ಲ. ಸತತ 6 ಪಂದ್ಯಗಳನ್ನು ಗೆದ್ದು ಪವಾಡ ಸದೃಶ ರೀತಿಯಲ್ಲಿ ಪ್ಲೇ-ಆಫ್‌ಗೆ ನುಗ್ಗಿದೆ.

ಶನಿವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಅತಿರೋಚಕ ಕದನದಲ್ಲಿ ಆರ್‌ಸಿಬಿಗೆ 27 ರನ್‌ ಗೆಲುವು ಲಭಿಸಿತು. ಇದರೊಂದಿಗೆ ತಂಡ ಅಂಕಪಟ್ಟಿಯಲ್ಲಿ ಚೆನ್ನೈಯನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಿ 4ನೇ ಸ್ಥಾನ ಪಡೆದರೆ, ಚೆನ್ನೈ 5ನೇ ಸ್ಥಾನಕ್ಕೆ ಕುಸಿಯಿತು.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದು 218 ರನ್‌. ಪ್ಲೇ-ಆಫ್‌ಗೇರಲು ಚೆನ್ನೈ 201 ರನ್‌ ಗಳಿಸಿದರೆ ಸಾಕಾಗಿತ್ತು. ಆದರೆ ಆರ್‌ಸಿಬಿಯ ಮೊನಚು ದಾಳಿ ಮುಂದೆ ಚೆನ್ನೈನ ಲೆಕ್ಕಾಚಾರ ತಲೆಕೆಳಗಾಯಿತು. ತಂಡ 7 ವಿಕೆಟ್‌ಗೆ 191 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಮೊದಲ ಎಸೆತದಲ್ಲೇ ಗಾಯಕ್ವಾಡ್‌(00), 3ನೇ ಓವರಲ್ಲಿ ಡ್ಯಾರಿಲ್‌ ಮಿಚೆಲ್‌(04) ಪೆವಿಲಿಯನ್‌ ಸೇರಿಯಾಗಿತ್ತು. ಆದರೆ ಅಜಿಂಕ್ಯ ರಹಾನೆ (33) ಹಾಗೂ ರಚಿನ್‌ ರವೀಂದ್ರ (37 ಎಸತಗಳಲ್ಲಿ 61) 3ನೇ ವಿಕೆಟ್‌ಗೆ 66 ರನ್‌ ಸೇರಿಸಿ ತಂಡಕ್ಕೆ ಆಸರೆಯಾದರು. ಆದರೆ ರಹಾನೆ ನಿರ್ಗಮನದ ಬಳಿಕ ಆರ್‌ಸಿಬಿ ಮತ್ತೆ ನಿಯಂತ್ರಣ ಸಾಧಿಸಿತು. ರಚಿನ್‌ ರನ್‌ ಔಟ್‌ ತಂಡದ ದಿಕ್ಕೆಡಿಸಿತು. ಬಳಿಕ ಧೋನಿ (25), ಜಡೇಜಾ (22 ಎಸೆತಗಳಲ್ಲಿ ಔಟಾಗದೆ 42) ಹೋರಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಕೊನೆ 2 ಓವರಲ್ಲಿ 35, ಕೊನೆ ಓವರಲ್ಲಿ 17 ರನ್‌ ಗಳಿಸಿದ್ದರೂ ಚೆನ್ನೈ ಪ್ಲೇ-ಆಫ್‌ಗೇರುತ್ತಿತ್ತು. ಆದರೆ 20ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ಧೋನಿ, 2ನೇ ಎಸೆತದಲ್ಲಿ ಔಟಾಗಿದ್ದರಿಂದ ತಂಡದ ಕನಸು ನುಚ್ಚುನೂರಾಯಿತು. ಯಶ್‌ ದಯಾಳ್‌ರ ಕೊನೆಯ ಓವರ್‌ ಆರ್‌ಸಿಬಿಯನ್ನು ದಡ ಸೇರಿಸಿತು.

ಮಳೆ ನಡುವೆ ಮ್ಯಾಜಿಕ್‌: ಬೃಹತ್‌ ಮೊತ್ತ ಪೇರಿಸಿದರಷ್ಟೇ ಪ್ಲೇ-ಆಫ್‌ಗೇರಬಹುದು ಎಂದರಿತಿದ್ದ ಆರ್‌ಸಿಬಿ ಆರಂಭದಲ್ಲೇ ಅಬ್ಬರಿಸತೊಡಗಿದರೂ, ಕೆಲಹೊತ್ತು ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದ್ದರಿಂದ ತಂಡದ ತಾಳ ತಪ್ಪಿತು. ಪವರ್‌-ಪ್ಲೇನ ಕೊನೆ 3 ಓವರಲ್ಲಿ ಕೇವಲ 11 ರನ್‌ ಬಾರಿಸಿತು. ಕೊಹ್ಲಿಯ 47 ರನ್‌ ಹೊರತಾಗಿಯೂ 10 ಓವರಲ್ಲಿ ತಂಡ 78 ರನ್‌ ಗಳಿಸಿತ್ತು. ಆದರೆ ಬಳಿಕ ಆರ್‌ಸಿಬಿಯನ್ನು ಹಿಡಿದು ನಿಲ್ಲಿಸಲು ಆಗಲಿಲ್ಲ. ಫಾಫ್‌ ಡು ಪ್ಲೆಸಿ(54), ರಜತ್‌ ಪಾಟೀದಾರ್‌(23 ಎಸೆತಗಳಲ್ಲಿ 41), ಗ್ರೀನ್‌(17 ಎಸೆತಗಳಲ್ಲಿ ಔಟಾಗದೆ 38), ಕಾರ್ತಿಕ್‌(14), ಮ್ಯಾಕ್ಸ್‌ವೆಲ್‌(16) ಅಬ್ಬರಿಸಿ ತಂಡವನ್ನು 220ರ ಸನಿಹಕ್ಕೆ ತಂದುನಿಲ್ಲಿಸಿದರು. ಕೊನೆ 7 ಓವರಲ್ಲಿ ತಂಡ 105 ರನ್‌ ದೋಚಿತು. ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 218/5 (ಡು ಪ್ಲೆಸಿ 54, ಕೊಹ್ಲಿ 47, ರಜತ್‌ 41, ಗ್ರೀನ್‌ 38*, ಶಾರ್ದೂಲ್‌ 2-61), ಚೆನ್ನೈ 20 ಓವರಲ್ಲಿ 191/7 (ರಚಿನ್‌ 61, ಜಡೇಜಾ 42*, ಯಶ್‌ 2-42 )-9ನೇ ಬಾರಿ ಆರ್‌ಸಿಬಿ ಪ್ಲೇ-ಆಫ್‌ಗೆಐಪಿಎಲ್‌ನಲ್ಲಿ ಆರ್‌ಸಿಬಿ 9ನೇ ಬಾರಿ ಪ್ಲೇ-ಆಫ್‌ ಪ್ರವೇಶಿಸಿತು. ಈ ಪೈಕಿ 2009, 2011, 2016ರಲ್ಲಿ ತಂಡ ರನ್ನರ್‌-ಆಪ್‌ ಆಗಿತ್ತು. ಕಳೆದ ವರ್ಷ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.-‘ಮೇ 18’ರಂದು ಸೋಲೇ ಇಲ್ಲ!

ಆರ್‌ಸಿಬಿಗೆ ಮತ್ತೆ ಮೇ 18ರ ಅದೃಷ್ಟ ಕೈಹಿಡಿದಿದೆ. ಈ ಮೊದಲು ಐಪಿಎಲ್‌ನ 4 ಆವೃತ್ತಿಗಳಲ್ಲಿ ಮೇ 18ರಂದು ನಡೆದಿದ್ದ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಈ ಬಾರಿ ಮತ್ತೊಮ್ಮೆ ಜಯಭೇರಿ ಬಾರಿಸಿತು. ಈ ಪೈಕಿ 2013, 2014ರ ಮೇ 18ಕ್ಕೆ ಚೆನ್ನೈ ವಿರುದ್ಧವೇ ಗೆದ್ದಿತ್ತು.

03ನೇ ಬಾರಿ

ಚೆನ್ನೈ ಐಪಿಎಲ್‌ ಪ್ಲೇ-ಆಫ್‌ಗೇರಲು ವಿಫಲವಾಗಿದ್ದು ಇದು 3ನೇ ಬಾರಿ. 2020, 2022ರಲ್ಲೂ ಪ್ಲೇ-ಆಫ್‌ಗೇರಿರಲಿಲ್ಲ.--

06ನೇ ಬಾರಿ

ಈ ಬಾರಿ ಆರ್‌ಸಿಬಿ 6 ಬಾರಿ 200+ ರನ್‌ ಕಲೆಹಾಕಿತು. ಇದು ಆವೃತ್ತಿಯೊಂದರಲ್ಲಿ ಆರ್‌ಸಿಬಿಯ ಗರಿಷ್ಠ.-ಆರ್‌ಸಿಬಿ 150ಸಿಕ್ಸರ್‌ ದಾಖಲೆ

ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ 150+ ಸಿಕ್ಸರ್‌ ಸಿಡಿಸಿತು. ಇದು ಯಾವುದೇ ಟಿ20 ಲೀಗ್‌ನ ಆವೃತ್ತಿಯೊಂದರಲ್ಲಿ ತಂಡದವೊಂದರ ಗರಿಷ್ಠ. ಸನ್‌ರೈಸರ್ಸ್‌ ಈ ಬಾರಿ 146 ಸಿಕ್ಸರ್‌ ಸಿಡಿಸಿದೆ.-