ವಾಂಖೇಡೆಯಲ್ಲಿ ಆರ್‌ಸಿಬಿಯನ್ನು ಚೆಂಡಾಡಿದ ಮುಂಬೈ!

| Published : Apr 12 2024, 01:10 AM IST / Updated: Apr 12 2024, 04:26 AM IST

ಸಾರಾಂಶ

ಆರ್‌ಸಿಬಿಗೆ ಮತ್ತೊಂದು ಹೀನಾಯ ಸೋಲು. ಬೆಂಗಳೂರು ಬೌಲರ್‌ಗಳನ್ನು ಚೆಂಡಾಡಿದ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ ಅಮೋಘ ಗೆಲುವು. ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ ಮುಂಬೈ, 9ನೇ ಸ್ಥಾನದಲ್ಲೇ ಬಾಕಿಯಾದ ಆರ್‌ಸಿಬಿ.

ಮುಂಬೈ: ‘ಇದು ಹೊಸ ಅಧ್ಯಾಯ’ ಎಂದುಕೊಂಡು ಈ ಐಪಿಎಲ್‌ಗೆ ಕಣಕ್ಕಿಳಿದ ಆರ್‌ಸಿಬಿಗೆ ಎದುರಾಳಿಗಳೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಬಾರಿಸುತ್ತಿದ್ದಾರೆ.

ಗುರುವಾರ ಆರ್‌ಸಿಬಿ ಗಾಯದ ಮೇಲೆ ಮುಂಬೈ ಇಂಡಿಯನ್ಸ್‌ ಬರೆ ಎಳೆಯಿತು. ಬ್ಯಾಟರ್‌ಗಳ ಸ್ವರ್ಗ ವಾಂಖೇಡೆ ಕ್ರೀಡಾಂಗಣದಲ್ಲಿ ಮೊದಲು ಜಸ್‌ಪ್ರೀತ್‌ ಬೂಮ್ರಾ, ಆರ್‌ಸಿಬಿಯನ್ನು 200 ರನ್‌ಗಳೊಳಗೆ ಕಟ್ಟಿಹಾಕಿದರೆ, ಮುಂಬೈ ತನ್ನ ಬ್ಯಾಟಿಂಗ್‌ ಸೂಪರ್‌ ಹೀರೋಗಳ ಅಬ್ಬರದ ಆಟದ ನೆರವಿನಿಂದ 197 ರನ್‌ ಗುರಿಯನ್ನು ಕೇವಲ 3 ವಿಕೆಟ್‌ ಕಳೆದುಕೊಂಡು, ಇನ್ನೂ 27 ಎಸೆತ ಬಾಕಿ ಇರುವಂತೆಯೇ ತಲುಪಿತು.

ಈ ಹೀನಾಯ ಸೋಲು ಆರ್‌ಸಿಬಿಯ ಪ್ಲೇ-ಆಫ್‌ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು, 5 ಸೋಲು ಕಂಡಿರುವ ಆರ್‌ಸಿಬಿಯ ನೆಟ್‌ ರನ್‌ರೇಟ್‌ ಮತ್ತಷ್ಟು ಕುಸಿದಿದ್ದು, ಪ್ಲೇ-ಆಫ್‌ ಹಂತಕ್ಕೆ ಪ್ರವೇಶಿಸಬೇಕಿದ್ದರೆ ಬಾಕಿ ಇರುವ 8 ಪಂದ್ಯಗಳಲ್ಲೂ ಗೆಲ್ಲಬೇಕಾದ ಅನಿವಾರ್ಯತೆಯನ್ನು ತಂದುಕೊಂಡಿದೆ. ಹ್ಯಾಟ್ರಿಕ್‌ ಸೋಲಿನೊಂದಿಗೆ ಟೂರ್ನಿಯನ್ನು ಆರಂಭಿಸಿದ ಮುಂಬೈ, ಸತತ 2 ಗೆಲುವುಗಳನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲೇರಿದೆ. ಕಾರ್ತಿಕ್‌ ಕಮಾಲ್‌, ಬೂಮ್ರಾ ‘ಬೆಂಕಿ’: ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಆರ್‌ಸಿಬಿ, ಆರಂಭದಲ್ಲೇ ವಿರಾಟ್‌ ಕೊಹ್ಲಿ (3) ವಿಕೆಟ್‌ ಕಳೆದುಕೊಂಡಿತು. ಪವರ್‌-ಪ್ಲೇನಲ್ಲಿ 18 ಡಾಟ್‌ ಬಾಲ್‌ಗಳನ್ನು ಆಡಿದ ಆರ್‌ಸಿಬಿ 6 ಓವರ್‌ ಮುಕ್ತಾಯಕ್ಕೆ ಗಳಿಸಿದ್ದು ಕೇವಲ 44 ರನ್‌.

10 ಓವರ್‌ ಅಂತ್ಯಕ್ಕೆ 2 ವಿಕೆಟ್‌ಗೆ 89 ರನ್‌ ಗಳಿಸಿದ್ದ ಆರ್‌ಸಿಬಿಗೆ, ರಜತ್‌ ಪಾಟೀದಾರ್‌ ಹಾಗೂ ಫಾಫ್‌ ಡು ಪ್ಲೆಸಿಯ ಅರ್ಧಶತಕ ಆಸರೆಯಾಯಿತು. ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ 23 ಎಸೆತದಲ್ಲಿ 53 ರನ್‌ ಸಿಡಿಸಿ, ತಂಡ 190ರ ಗಡಿ ದಾಟಲು ಕಾರಣರಾದರು. ಆರ್‌ಸಿಬಿ ಕೊನೆಯ 5 ಓವರಲ್ಲಿ 66 ರನ್‌ ಗಳಿಸಿತು. ಮನಮೋಹಕ ಬೌಲಿಂಗ್‌ ಪ್ರದರ್ಶನ ತೋರಿದ ಬೂಮ್ರಾ 5 ವಿಕೆಟ್‌ ಕಬಳಿಸಿದರು.ಕಿಶನ್‌, ಸೂರ್ಯ ಅಬ್ಬರ: ಸಿರಾಜ್‌ ಎಸೆದ ಇನ್ನಿಂಗ್ಸ್‌ನ 2ನೇ ಓವರಲ್ಲಿ 23 ರನ್‌ ದೋಚಿದ ಮುಂಬೈ, ಹಿಂದಿರುಗಿ ನೋಡಲಿಲ್ಲ. ಮೊದಲು ಇಶಾನ್‌ ಕಿಶನ್‌ 34 ಎಸೆತದಲ್ಲಿ 69 ರನ್‌ ಚಚ್ಚಿದರೆ, ಬಳಿಕ ಕೇವಲ 17 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಸೂರ್ಯಕುಮಾರ್‌ 19 ಎಸೆತದಲ್ಲಿ 52 ರನ್‌ ಬಾರಿಸಿದರು. ರೋಹಿತ್‌ 38, ಹಾರ್ದಿಕ್‌ 6 ಎಸೆತದಲ್ಲಿ 21, ತಿಲಕ್‌ 16 ರನ್‌ ಗಳಿಸಿ ತಂಡವನ್ನು ನಿರಾಯಾಸವಾಗಿ ಗೆಲ್ಲಿಸಿದರು.

2015ರ ಬಳಿಕ ವಾಂಖೇಡೆ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ, ಈ ಸಲವೂ ನಿರಾಸೆ ಅನುಭವಿಸಿತು. ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 196/8 (ಡು ಪ್ಲೆಸಿ 61, ಕಾರ್ತಿಕ್‌ 53*, ರಜತ್‌ 50, ಬೂಮ್ರಾ 5-21), ಮುಂಬೈ 15.3 ಓವರಲ್ಲಿ 199/3 (ಕಿಶನ್‌ 69, ಸೂರ್ಯ 52, ರೋಹಿತ್‌ 38, ವೈಶಾಖ್‌ 1-32) ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ50 ಗೆಲುವು

ಐಪಿಎಲ್‌ನಲ್ಲಿ ಮುಂಬೈಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಇದು 50ನೇ ಗೆಲುವು. ಒಂದು ಕ್ರೀಡಾಂಗಣದಲ್ಲಿ 50 ಗೆಲುವು ಸಾಧಿಸಿದ ಮೊದಲ ತಂಡ.

65 ಸಿಕ್ಸರ್‌ಈ ಐಪಿಎಲ್‌ನಲ್ಲಿ ಆರ್‌ಸಿಬಿ ಈಗಾಗಲೇ 65 ಸಿಕ್ಸರ್‌ ಚಚ್ಚಿಸಿಕೊಂಡಿದೆ. 10 ತಂಡಗಳ ಪೈಕಿ ಅತಿಹೆಚ್ಚು.

27 ವಿಕೆಟ್‌

ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ (27) ಮೊದಲ ಸ್ಥಾನಕ್ಕೇರಿದ್ದಾರೆ.