ಭಾರತೀಯ ಕ್ರಿಕೆಟ್‌ಗೆ ನಷ್ಟವಾಗ್ತಿದೆ: ‘ಇಂಪ್ಯಾಕ್ಟ್‌’ ಆಟಗಾರ ನಿಯಮಕ್ಕೆ ರೋಹಿತ್ ಆಕ್ಷೇಪ

| Published : Apr 19 2024, 01:07 AM IST / Updated: Apr 19 2024, 04:31 AM IST

ಭಾರತೀಯ ಕ್ರಿಕೆಟ್‌ಗೆ ನಷ್ಟವಾಗ್ತಿದೆ: ‘ಇಂಪ್ಯಾಕ್ಟ್‌’ ಆಟಗಾರ ನಿಯಮಕ್ಕೆ ರೋಹಿತ್ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್‌ಗಳಿಗೆ ಬೌಲಿಂಗ್‌ ಸಿಗುತ್ತಿಲ್ಲ. 7, 8ನೇ ಕ್ರಮಾಂಕದಲ್ಲಿ ಆಡುವವರಿಗೆ ಬ್ಯಾಟಿಂಗ್‌ ಕೂಡಾ ಸಿಗುತ್ತಿಲ್ಲ ಎಂದು ರೋಹಿತ್‌ ಬೇಸರ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಐಪಿಎಲ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್‌ ಆಟಗಾರ ನಿಯಮಕ್ಕೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ ಮನರಂಜನೆಗಾಗಿ ಭಾರತೀಯ ಕ್ರಿಕೆಟ್‌ಗೆ ನಷ್ಟ ಉಂಟಾಗುತ್ತಿದೆ ಎಂದಿದ್ದಾರೆ. 

ಈ ಬಗ್ಗೆ ಯೂಟ್ಯೂಬ್‌ ಶೋವೊಂದರಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್‌ 11 ಜನ ಆಡುವ ಆಟ, 12 ಜನರಿಂದಲ್ಲ. ಇಂಪ್ಯಾಕ್ಟ್‌ ಆಟಗಾರ ನಿಯಮದ ಬಗ್ಗೆ ನನಗೆ ಸಂತೃಪ್ತಿಯಿಲ್ಲ. ಇದು ಮನರಂಜನೆ ಒದಗಿಸಬಹುದು. ಆದರೆ ಭಾರತೀಯ ಕ್ರಿಕೆಟ್‌ಗೆ ಇದರಿಂದ ನಷ್ಟವಾಗಲಿದೆ. 

ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್‌ಗಳಿಗೆ ಬೌಲಿಂಗ್‌ ಸಿಗುತ್ತಿಲ್ಲ. 7, 8ನೇ ಕ್ರಮಾಂಕದಲ್ಲಿ ಆಡುವವರಿಗೆ ಬ್ಯಾಟಿಂಗ್‌ ಕೂಡಾ ಸಿಗುತ್ತಿಲ್ಲ. ಸಿಕ್ಕರೂ ಕೇವಲ 7-8 ಎಸೆತಗಳು ಮಾತ್ರ ಸಿಗುತ್ತಿದೆ’ ಎಂದು ರೋಹಿತ್‌ ಬೇಸರ ವ್ಯಕ್ತಪಡಿಸಿದ್ದಾರೆ.ಇದೇ ವೇಳೆ, ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆಗೆ ಸಂಬಂಧಿಸಿದಂತೆ ಕೋಚ್‌ ದ್ರಾವಿಡ್‌, ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್‌ ಅವರನ್ನು ಭೇಟಿಯಾಗಿರುವ ಬಗೆಗಿನ ವರದಿಗಳನ್ನು ರೋಹಿತ್‌ ಅಲ್ಲಗಳೆದಿದ್ದಾರೆ. ‘ನಾನು, ದ್ರಾವಿಡ್‌ ಅಥವಾ ಅಗರ್ಕರ್‌ ಕ್ಯಾಮರಾದ ಮುಂದೆ ಬಂದು ಮಾತನಾಡದ ಹೊರತು ಬೇರೆಲ್ಲವೂ ಸುಳ್ಳು’ ಎಂದಿದ್ದಾರೆ.

ಪಾಕ್‌ ವಿರುದ್ಧ ಸರಣಿ ಆಡಲು ಒಲವು

ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ರೋಹಿತ್‌ ಶರ್ಮಾ ಒಲವು ತೋರಿಸಿದ್ದಾರೆ. ತಟಸ್ಥ ಸ್ಥಳದಲ್ಲಿ ಪಾಕ್‌ ವಿರುದ್ಧ ಟೆಸ್ಟ್‌ ಸರಣಿ ಆಯೋಜನೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ರೋಹಿತ್‌ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಟೆಸ್ಟ್‌ ಪಂದ್ಯವಾಡುವ ಅವಕಾಶ ಸಿಕ್ಕರೆ ಖುಷಿಯಿಂದ ಆಡುತ್ತೇನೆ ಎಂದಿದ್ದಾರೆ. ‘ಪಾಕ್‌ ಉತ್ತಮ ತಂಡ. ಅವರ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಆಡುತ್ತಿದ್ದೇವೆ. ಸರಣಿ ಆಡುವುದನ್ನೂ ಇಷ್ಟಪಡುತ್ತೇನೆ ಎಂದಿದ್ದಾರೆ.