ನಾಳೆಯಿಂದ ಐಪಿಎಲ್‌ ಹಂಗಾಮ: ಟಿ20 ಹಬ್ಬಕ್ಕೆ ಫ್ಯಾನ್ಸ್‌ ಕಾತರ

| Published : Mar 21 2024, 01:05 AM IST / Updated: Mar 21 2024, 08:42 AM IST

ಸಾರಾಂಶ

17ನೇ ಐಪಿಎಲ್‌ಗೆ ಕ್ಷಣಗಣನೆ. ಟ್ರೋಫಿ ಗೆಲುವಿಗಾಗಿ 10 ತಂಡಗಳ ಕಾದಾಟ. ಟಿ20 ವಿಶ್ವಕಪ್‌ ದೃಷ್ಟಿಯಲ್ಲಿ ಆಟಗಾರರಿಗೆ ಮಹತ್ವದ ಟೂರ್ನಿ. ಸ್ಟಾರ್‌ ಕ್ರಿಕೆಟಿಗರಿಗೆ ಕಮ್‌ಬ್ಯಾಕ್‌, ಯುವ ತಾರೆಗಳಿಗೆ ನಾಯಕತ್ವದ ಸವಾಲು. ಧೋನಿ, ನಾಯಕತ್ವವಿಲ್ಲದ ರೋಹಿತ್‌ ಮೇಲೆ ಎಲ್ಲರ ಚಿತ್ತ.

ನವದೆಹಲಿ: ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿರುವಾಗಲೇ ದೇಶದೆಲ್ಲೆಡೆ ಬಹುನಿರೀಕ್ಷಿತ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ಗೆ ಕ್ಷಣಗಣನೆ ಶುರುವಾಗಿದೆ. 

2024ರ ಟೂರ್ನಿಗೆ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳುಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ರಸದೌತನ ಒದಗಿಸಲಿದೆ.

ಚುನಾವಣೆ ಹೊರತಾಗಿಯೂ ಭಾರತದಲ್ಲೇ ಐಪಿಎಲ್‌ ಆಯೋಜಿಸುವುದಾಗಿ ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಮೊದಲ ಚರಣದ ಅಂದರೆ 15 ದಿನಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದೆ. 

ಈ ಅವಧಿಯಲ್ಲಿ 21 ಪಂದ್ಯಗಳು ಆಯೋಜನೆಗೊಳ್ಳಲಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿ ಶೀಘ್ರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. 

ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ 3 ಬಾರಿ ರನ್ನರ್‌-ಅಪ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಮಾ.22ರಂದು ಉದ್ಘಾಟನಾ ಸಮಾರಂಭದಲ್ಲಿ ಸೆಣಸಾಡಲಿವೆ. 

ಬೆಂಗಳೂರಲ್ಲಿ ಮಾ.25ರಂದು ಮೊದಲ ಪಂದ್ಯ ನಡೆಯಲಿದ್ದು, ಆರ್‌ಸಿಬಿ-ಪಂಜಾಬ್‌ ಮುಖಾಮುಖಿಯಾಗಲಿವೆ.

ತಾರೆಯರ ಕಮ್‌ಬ್ಯಾಕ್‌ಗೆ ಕಾದು ಕುಳಿತಿರುವ ಫ್ಯಾನ್ಸ್: ಈ ಬಾರಿಯ ಐಪಿಎಲ್ ಹಲವರ ಕಮ್‌ಬ್ಯಾಕ್‌ಗೆ ಸಾಕ್ಷಿಯಾಗಲಿದ್ದು, ಯಾರು ಯಶಸ್ಸು ಕಾಣುತ್ತಾರೆ, ಯಾರು ವಿಫಲರಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. 

ಪ್ರಮುಖವಾಗಿ ವಿರಾಟ್‌ ಕೊಹ್ಲಿ ಹಾಗೂ ಎಂ.ಎಸ್‌.ಧೋನಿಯ ವಾಪಸ್ಸಾತಿಗೆ ಎಲ್ಲರೂ ಕಾಯುತ್ತಿದ್ದಾರೆ. ಕಳೆದ ವರ್ಷ ಐಪಿಎಲ್‌ ಬಳಿಕ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. 

ಇನ್ನು ವಿರಾಟ್‌ ಕೊಹ್ಲಿ ಹೆಚ್ಚೂ ಕಡಿಮೆ 3 ತಿಂಗಳ ಬಳಿಕ ಮೈದಾನಕ್ಕಿಳಿಯಲಿದ್ದಾರೆ. ಇನ್ನು, 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿ 14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಸ್ಟಾರ್‌ ಕ್ರಿಕೆಟಿಗ ರಿಷಭ್‌ ಪಂತ್‌ ಈ ಐಪಿಎಲ್‌ನಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲಿದ್ದಾರೆ. 

ಕಳೆದ ವರ್ಷ ಏಕದಿನ ವಿಶ್ವಕಪ್‌ ವೇಳೆ ಗಾಯಗೊಂಡಿದ್ದ ಹಾರ್ದಿಕ್‌ ಪಾಂಡ್ಯ, ಇತ್ತೀಚೆಗಷ್ಟೇ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ನಡುವೆ ಗಾಯಗೊಂಡಿದ್ದ ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌ ಕೂಡಾ ಐಪಿಎಲ್‌ ಮೂಲಕ ಕಮ್‌ಬ್ಯಾಕ್‌ಗೆ ಸಜ್ಜಾಗುತ್ತಿದ್ದಾರೆ.

ಹೊಸ ನಾಯಕರ ಮೇಲೆ ಹೆಚ್ಚಿನ ನಿರೀಕ್ಷೆ!
ಈ ಬಾರಿ ಹಲವರು ಮೊದಲ ಸಲ ನಾಯಕರಾಗಿದ್ದಾರೆ. ಹರಾಜಿನಲ್ಲಿ ಬರೋಬ್ಬರಿ ₹20.5 ಕೋಟಿಗೆ ಹೈದರಾಬಾದ್‌ ಪಾಲಾಗಿದ್ದ ಪ್ಯಾಟ್‌ ಕಮಿನ್ಸ್‌ ಮೊದಲ ಬಾರಿ ಐಪಿಎಲ್‌ ನಾಯಕತ್ವ ವಹಿಸಲಿದ್ದಾರೆ. 

ಆಸ್ಟ್ರೇಲಿಯಾವನ್ನು ಯಶಸ್ಸಿನ ಉತ್ತುಂಗಕ್ಕೇರಿಸಿರುವ ಕಮಿನ್ಸ್‌ ಐಪಿಎಲ್‌ನಲ್ಲಿ ಯಶಸ್ವಿಯಾಗುತ್ತಾರಾ ಎಂಬ ಕೌತುಕವಿದೆ. ಹಾರ್ದಿಕ್‌ ಪಾಂಡ್ಯ ತಮ್ಮ ಹಳೆ ತಂಡ ಮುಂಬೈನ ನಾಯಕತ್ವ ವಹಿಸಲಿದ್ದು, ತಂಡಕ್ಕಿರುವ ಖ್ಯಾತಿಯನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆಯಿದೆ. 

ಯುವ ತಾರೆ ಶುಭ್‌ಮನ್‌ ಗಿಲ್‌ಗೆ ಮೊದಲ ಬಾರಿ ಗುಜರಾತ್‌ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು, ಅದರ ಒತ್ತಡ ನಿಭಾಯಿಸಿ ಉತ್ತಮ ಪ್ರದರ್ಶನ ಮುಂದುವರಿಸಬೇಕಾಗಿದೆ. 

ಇನ್ನು ಗಾಯದಿಂದಾಗಿ ಕಳೆದ ವರ್ಷದ ಟೂರ್ನಿಗೆ ಗೈರಾಗಿದ್ದ ಶ್ರೇಯಸ್‌ ಅಯ್ಯರ್‌ ಕೋಲ್ಕತಾ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಐಪಿಎಲ್‌ ವೇದಿಕೆ: ಜೂನ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದ್ದು, ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಈ ಬಾರಿಯ ಐಪಿಎಲ್‌ ಪ್ರಮುಖ ಮಾನದಂಡವಾಗಲಿದೆ. 

ಟೀಂ ಇಂಡಿಯಾದಲ್ಲೂ ಈಗಾಗಲೇ 25ಕ್ಕೂ ಹೆಚ್ಚು ಆಟಗಾರರು ಟಿ20 ವಿಶ್ವಕಪ್‌ ತಂಡದ ಆಯ್ಕೆ ರೇಸ್‌ನಲ್ಲಿದ್ದಾರೆ. ಇವರಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದು ಐಪಿಎಲ್ ಪ್ರದರ್ಶನದ ಮೇಲೆ ನಿರ್ಧಾರವಾಗಲಿದೆ.

ಪ್ರಮುಖವಾಗಿ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ರಿಷಭ್‌ ಪಂತ್, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ ಈ ಬಾರಿ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಬೇಕಾದ ಅನಿವಾರ್ಯತೆ ಇದೆ. 

ಯುವ ತಾರೆಗಳೂ ತಮ್ಮ ಸ್ಫೋಟಕ ಆಟದ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯಲು ಎದುರು ನೋಡುತ್ತಿದ್ದಾರೆ.

ಕ್ಯಾಪ್ಟನ್ಸಿ ಕಳೆದುಕೊಂಡ ರೋಹಿತ್‌ರ ಆಟ ಹೇಗಿರುತ್ತೆ?
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಮುಂಬೈನ ನಾಯಕತ್ವವನ್ನು ರೋಹಿತ್‌ ಶರ್ಮಾ ಕಳೆದುಕೊಳ್ಳಲಿದ್ದಾರೆ ಎಂದು, ಆ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯರ ನೇಮಕವಾಗುವವರೆಗೂ ಯಾರೂ ಊಹಿಸಿರಲಿಕ್ಕಿಲ್ಲ.

ಆದರೀಗ 5 ಬಾರಿ ಮುಂಬೈ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ರೋಹಿತ್‌, ಪಾಂಡ್ಯ ನಾಯಕತ್ವದಲ್ಲಿ ಆಡಬೇಕಿದೆ. ರೋಹಿತ್‌ ಆಟದ ಮೇಲೆ ಎಲ್ಲರ ಕಣ್ಣಿದೆ.

ಧೋನಿಗೆ ಕೊನೆ ಐಪಿಎಲ್‌?
ಚೆನ್ನೈಯನ್ನು 5 ಬಾರಿ ಚಾಂಪಿಯನ್‌ ಪಟ್ಟಕ್ಕೇರಿಸಿರುವ ಎಂ.ಎಸ್‌.ಧೋನಿಗೆ ಈಗ 42 ವರ್ಷ. ಪ್ರತಿ ಬಾರಿ ಐಪಿಎಲ್‌ ಮುಗಿಯುವಾಗಲೂ ಧೋನಿ ಮುಂದಿನ ವರ್ಷ ಆಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ, ಕುತೂಹಲ ಎಲ್ಲರಲ್ಲಿರುತ್ತದೆ. ಆದರೆ ಧೋನಿ ಮಾತ್ರ ಐಪಿಎಲ್‌ನಿಂದ ನಿವೃತ್ತಿಯಾಗುವ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಆದರೆ ಈ ವರ್ಷ ಅವರ ಕೊನೆಯ ಐಪಿಎಲ್‌ ಆಗುವ ಸಾಧ್ಯತೆ ಹೆಚ್ಚು.

ಇನ್ನು ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟರ್‌ ಡೇವಿಡ್‌ ವಾರ್ನರ್‌, ಭಾರತದ ಹಿರಿಯ ಸ್ಪಿನ್ನರ್‌ಗಳಾದ ಪಿಯೂಶ್‌ ಚಾವ್ಲಾ, ಅಮಿತ್‌ ಮಿಶ್ರಾ ಕೂಡಾ ನಿವೃತ್ತಿ ಅಂಚಿನಲ್ಲಿದ್ದಾರೆ. ಇದೇ ವೇಳೆ ಶಿಖರ್‌ ಧವನ್‌, ಭುವನೇಶ್ವರ್‌ ಕುಮಾರ್‌ಗೂ ಈ ಐಪಿಎಲ್‌ ಕೊನೆಯ ಟೂರ್ನಿಯಾದರೂ ಅಚ್ಚರಿಯಿಲ್ಲ.

ಉದ್ಘಾಟನೆಗೆ ಅಕ್ಷಯ್‌, ಸೋನು ನಿಗಂ, ರೆಹಮಾನ್‌: ಮಾ.22ರಂದು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದೆ. 

ಸಂಜೆ 6.30ಕ್ಕೆ ಸಮಾರಂಭ ಆರಂಭವಾಗಲಿದ್ದು, ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌, ಖ್ಯಾತ ಗಾಯಕ ಸೋನು ನಿಗಂ ಸೇರಿದಂತೆ ಪ್ರಮುಖರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.