ಫಿಟ್‌ ಇದ್ರೂ ರಣಜಿ ಟ್ರೋಫಿ ಪಂದ್ಯಕ್ಕೆ ಶ್ರೇಯಸ್‌ ಅಯ್ಯರ್‌ ಗೈರು?

| Published : Feb 23 2024, 01:47 AM IST

ಫಿಟ್‌ ಇದ್ರೂ ರಣಜಿ ಟ್ರೋಫಿ ಪಂದ್ಯಕ್ಕೆ ಶ್ರೇಯಸ್‌ ಅಯ್ಯರ್‌ ಗೈರು?
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ದೇಸಿ ಕ್ರಿಕೆಟ್‌ ಆಡಿ ಎಂದು ಬಿಸಿಸಿಐ ಸೂಚಿಸುತ್ತಿದ್ದರೂ ಭಾರತದ ಕೆಲ ಆಟಗಾರರು ಮಂಡಳಿಯ ಮಾತನ್ನು ಕಡೆಗಣಿಸುತ್ತಿದ್ದಾರೆ. ಈ ನಡುವೆ ತಾರಾ ಬ್ಯಾಟರ್ ಶ್ರೇಯಸ್‌ ಅಯ್ಯರ್‌ ಗಾಯದ ನೆಪ ಹೇಳಿ ರಣಜಿ ಪಂದ್ಯಕ್ಕೆ ಗೈರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಬೆಂಗಳೂರು: ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ದೇಸಿ ಕ್ರಿಕೆಟ್‌ ಆಡಿ ಎಂದು ಬಿಸಿಸಿಐ ಸೂಚಿಸುತ್ತಿದ್ದರೂ ಭಾರತದ ಕೆಲ ಆಟಗಾರರು ಮಂಡಳಿಯ ಮಾತನ್ನು ಕಡೆಗಣಿಸುತ್ತಿದ್ದಾರೆ. ಈ ನಡುವೆ ತಾರಾ ಬ್ಯಾಟರ್ ಶ್ರೇಯಸ್‌ ಅಯ್ಯರ್‌ ಗಾಯದ ನೆಪ ಹೇಳಿ ರಣಜಿ ಪಂದ್ಯಕ್ಕೆ ಗೈರಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ಶ್ರೇಯಸ್‌ ಇಂಗ್ಲೆಂಡ್‌ ವಿರುದ್ಧ ಮೊದಲ ಟೆಸ್ಟ್‌ ಬಳಿಕ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದ ಅವರು, ಶುಕ್ರವಾರಂದಿಂದ ಆರಂಭಗೊಳ್ಳಲಿರುವ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಿಂದ ಬೆನ್ನು ನೋವಿನ ನೆಪ ಹೇಳಿ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಮುಂಬೈ ಕ್ರಿಕೆಟ್‌ ಸಂಸ್ಥೆಗೂ ಅವರು ಮಾಹಿತಿ ನೀಡಿದ್ದಾರೆ. ಆದರೆ ಶ್ರೇಯಸ್‌ ಗಾಯದ ಬಗ್ಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಿಂದ ಬಿಸಿಸಿಐ ಆಯ್ಕೆ ಸಮಿತಿಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಶ್ರೇಯಸ್‌ ಫಿಟ್‌ ಆಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಶ್ರೇಯಸ್‌ ಟೀಂ ಇಂಡಿಯಾದಿಂದ ಹೊರಬಿದ್ದ ಬಳಿಕ ಯಾವುದೇ ಹೊಸ ಗಾಯ ಆಗಿಲ್ಲ. ಅವರು ಆಡಲು ಫಿಟ್ ಇದ್ದಾರೆ ಎಂದು ಎನ್‌ಸಿಎ ಮಾಹಿತಿ ನೀಡಿದೆ.ಆಟಗಾರರು ಪದೇ ಪದೇ ದೇಸಿ ಕ್ರಿಕೆಟ್‌ನಿಂದ ತಪ್ಪಿಸುತ್ತಿರುವ ಬಗ್ಗೆ ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಎಚ್ಚರಿಕೆ ನೀಡಿದ್ದು, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ದೇಸಿ ಕ್ರಿಕೆಟ್‌ ಆಡಲೇಬೇಕು ಎಂದು ಹೇಳಿದ್ದರು. ಅಲ್ಲದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದರು.