ಸಾರಾಂಶ
ನವದೆಹಲಿ: ರಾಷ್ಟ್ರೀಯ ತಂಡದ ಆಯ್ಕೆಗೆ ಪರಿಗಣಿಸಬೇಕಿದ್ದರೆ ರಣಜಿ ಆಡಿ ಎಂಬ ಸೂಚನೆಯನ್ನು ಕಡೆಗಣಿಸುತ್ತಿರುವ ತಾರಾ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್‌ರನ್ನು ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಗಿಡಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಸಿಸಿಐ ಈಗಾಗಲೇ 2023-24ರ ಗುತ್ತಿಗೆ ಪಟ್ಟಿ ಸಿದ್ಧಪಡಿಸಿದ್ದು, ಇಶಾನ್, ಶ್ರೇಯಸ್‌ರನ್ನು ಹೊರಗಿಟ್ಟಿದೆ ಎಂದು ಹೇಳಲಾಗುತ್ತಿದೆ. ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇಶಾನ್, ಶ್ರೇಯಸ್ ಇಬ್ಬರೂ ಸದ್ಯ ರಾಷ್ಟ್ರೀಯ ತಂಡದಿಂದ ಹೊರಗಿದ್ದಾರೆ. ಆದರೆ ರಣಜಿ ಆಡುವ ಬದಲು ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ದೇಸಿ ಕ್ರಿಕೆಟ್ ಆಡುವುದನ್ನು ತಪ್ಪಿಸಿಕೊಂಡರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ನಡುವೆಯೂ ಇಬ್ಬರೂ ರಣಜಿ ಆಡುವುದರಿಂದ ಹಿಂದೆ ಸರಿದ್ದರು. ಹಾಗಾಗಿ ಯುವ ಆಟಗಾರರಿಬ್ಬರು ಕೇಂದ್ರೀಯ ಗುತ್ತಿಗೆಯಿಂದ ಹೊರಬೀಳುವ ಸಾಧ್ಯತೆ ಇದೆ.ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ನಂತರ ಕಿಶನ್ ಭಾರತದ ಪರ ಆಡಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಅಂತಿಮ 3 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಿಂದ ಅಯ್ಯರ್ ಗಾಯದ ಕಾರಣಕ್ಕೆ ಹೊರಗುಳಿದಿದ್ದಾರೆ. ಆದರೆ ಗಾಯದಿಂದ ಈಗಾಗಲೇ ಅವರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಹೊರತಾಗಿಯೂ ಅವರು ರಣಜಿ ಆಡುತ್ತಿಲ್ಲ.