ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ 2036ರ ಆಯೋಜನೆ ಭಾರತದ ಕನಸು : ಪ್ರಧಾನಿ ನರೇಂದ್ರ ಮೋದಿ

| Published : Aug 16 2024, 12:46 AM IST / Updated: Aug 16 2024, 04:28 AM IST

'Instill Fear in Rapists': PM Modi on Kolkata Doctor Rape-Murder | Independence Day Speech

ಸಾರಾಂಶ

ಜಾಗತಿಕ ಕ್ರೀಡಾಕೂಟ ಆತಿಥ್ಯಕ್ಕೆ ನಾವು ಸಜ್ಜಾಗುತ್ತಿದ್ದೇವೆ, ನಮಗೆ ಅದರ ಸಾಮರ್ಥ್ಯವಿದೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅಭಿಮತ. ಈಗಾಗಲೇ ಕ್ರೀಡಾಕೂಟಕ್ಕೆ ಬಿಡ್‌ ಸಲ್ಲಿಸಿರುವ ಭಾರತ

ನವದೆಹಲಿ: 2036ರ ಒಲಿಂಪಿಕ್ಸ್‌ ಆಯೋಜನೆ ಆತಿಥ್ಯ ಹಕ್ಕು ಸಿಗಲು ಎಲ್ಲಾ ಪ್ರಯತ್ನ ಮಾಡುವುದಾಗಿ ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಒಲಿಂಪಿಕ್ಸ್‌ ಆಯೋಜನೆ ಭಾರತದ ಕನಸು’ ಎಂದು ಹೇಳಿದ್ದಾರೆ.

ಗುರುವಾರ ಕೆಂಪುಕೋಟೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ‘2026ರ ಒಲಿಂಪಿಕ್ಸ್‌ ಆಯೋಜಿಸುವುದು ಭಾರತದ ಕಸನು. ಅದಕ್ಕಾಗಿ ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಜಿ20 ಶೃಂಗಸಭೆ ಆಯೋಜಿಸಿತ್ತು.

 ಈ ಮೂಲಕ ಭಾರತ ಯಾವುದೇ ಜಾಗತಿಕ ಸಮಾರಂಭ ಆಯೋಜಿಸಲು ಸಮರ್ಥವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ಹೇಳಿದರು.ಅಲ್ಲದೆ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ಅಥ್ಲೀಟ್‌ಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಮೋದಿ, ‘ಒಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರುವಂತೆ ಮಾಡಿದ ಎಲ್ಲರಿಗೂ ಅಭಿನಂದನೆಗಳು. 140 ಕೋಟಿ ಭಾರತೀಯರ ಪರವಾಗಿ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. 

ಇನ್ನು ಕೆಲವೇ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಅಥ್ಲೀಟ್‌ಗಳು ಪ್ಯಾರಿಸ್‌ಗೆ ತೆರಳಲಿದ್ದಾರೆ. ಅವರಿಗೆ ಶುಭ ಹಾರೈಕೆಗಳು’ ಎಂದು ಅವರು ಹೇಳಿದರು.ಪ್ರಧಾನಿ ಮೋದಿ ಈ ಹಿಂದೆಯೂ ಹಲವು ಬಾರಿ ಒಲಿಂಪಿಕ್ಸ್‌ ಆಯೋಜನೆ ಬಗ್ಗೆ ಮಾತನಾಡಿದ್ದರು. ಈಗಾಗಲೇ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ)ಯು ಕ್ರೀಡಾಕೂಟದ ಆತಿಥ್ಯ ಹಕ್ಕಿಗಾಗಿ ಬಿಡ್‌ ಕೂಡಾ ಸಲ್ಲಿಸಿದೆ. 

ಇಂಡೋನೇಷ್ಯಾ, ಟರ್ಕಿ, ಚಿಲಿ ಕೂಡಾ ಬಿಡ್‌ ಸಲ್ಲಿಸಿದ್ದು, ಸೌದಿ ಅರೇಬಿಯಾ, ಕತಾರ್‌, ಚೀನಾ ಕೂಡಾ ಆತಿಥ್ಯ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆತಿಥ್ಯ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿಯು ಮುಂದಿನ ವರ್ಷ ಘೋಷಿಸಲಿದೆ.ಭಾರತ ಈ ಮೊದಲು ಜಾಗತಿಕ ಮಟ್ಟದ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು 2010ರಲ್ಲಿ. ಆಗ ನವದೆಹಲಿಯಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಆಯೋಜನೆಗೊಂಡಿತ್ತು. ಆದರೆ ಕ್ರೀಡಾಕೂಟ ಆಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು.

ಸ್ವಾತಂತ್ರ್ಯೋತ್ಸವದಲ್ಲಿ ಒಲಿಂಪಿಯನ್‌ಗಳು ಭಾಗಿ

ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಭಾರತದ ಒಲಿಂಪಿಯನ್‌ಗಳು ಕೂಡಾ ಪಾಲ್ಗೊಂಡರು. ಶೂಟರ್‌ ಮನು ಭಾಕರ್‌, ಸರಬ್ಜೋತ್ ಸಿಂಗ್‌, ಹಾಕಿ ತಂಡದ ನಾಯಕ ಹರ್ಮನ್‌ಪ್ರತ್‌ ಸಿಂಗ್‌, ಗೋಲ್‌ಕೀಪರ್‌ ಶ್ರೀಜೇಶ್‌ ಹಾಗೂ ಇತರ ಕೆಲ ಕ್ರೀಡಾಪಟುಗಳು ಸಹ ಈ ವೇಳೆ ಉಪಸ್ಥಿತರಿದ್ದರು.