ಸಾರಾಂಶ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ 2ನೇ ದಿನವಾದ ಶನಿವಾರ ಒಟ್ಟು 15 ವಿಕೆಟ್‌ಗಳು ಪತನಗೊಂಡಿದ್ದು, ಮೂರೇ ದಿನಕ್ಕೆ ಪಂದ್ಯ ಮುಕ್ತಾಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಕೋಲ್ಕತಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ 2ನೇ ದಿನವಾದ ಶನಿವಾರ ಒಟ್ಟು 15 ವಿಕೆಟ್‌ಗಳು ಪತನಗೊಂಡಿದ್ದು, ಮೂರೇ ದಿನಕ್ಕೆ ಪಂದ್ಯ ಮುಕ್ತಾಯಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ 2ನೇ ದಿನವೇ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದು, ಬ್ಯಾಟರ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಇದರ ಹೊರತಾಗಿಯೂ ಭಾರತ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದೆ. ಬ್ಯಾಟರ್‌ಗಳ ಸಾಧಾರಣ ಪ್ರದರ್ಶನದ ಬಳಿಕ ರವೀಂದ್ರ ಜಡೇಜಾ ಸ್ಪಿನ್ ಮೋಡಿ ಭಾರತ ಪ್ರಾಬಲ್ಯ ಸಾಧಿಸಲು ನೆರವಾಯಿತು.
ಮೊದಲ ದಿನ ದ.ಆಫ್ರಿಕಾ 159 ರನ್‌ಗೆ ಆಲೌಟಾಗಿದ್ದರೆ, ಭಾರತ 1 ವಿಕೆಟ್‌ಗೆ 37 ರನ್ ಗಳಿಸಿತ್ತು. ಶನಿವಾರ ಬ್ಯಾಟಿಂಗ್ ಪುನಾರಂಭಿಸಿದ ಭಾರತ 189 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿರುವ ದ.ಆಫ್ರಿಕಾ 2ನೇ ದಿನದಂತ್ಯಕ್ಕೆ 7 ವಿಕೆಟ್ ನಷ್ಟದಲ್ಲಿ 93 ರನ್ ಗಳಿಸಿದ್ದು, 63 ರನ್ ಮುನ್ನಡೆಯಲ್ಲಿದೆ.
ಇನ್ನಿಂಗ್ಸ್ ಮುನ್ನಡೆ:
122 ರನ್ ಹಿನ್ನಡೆಯೊಂದಿಗೆ ಶನಿವಾರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದಿಂದ ವಿಶೇಷ ಆಟ ಕಂಡುಬರಲಿಲ್ಲ. ವಾಷಿಂಗ್ಟನ್ ಸುಂದರ್ 29 ರನ್‌ಗೆ ಔಟಾದರೆ, ನಾಯಕ ಶುಭ್‌ಮನ್ ಗಿಲ್ 4 ರನ್ ಗಳಿಸಿದ್ದಾಗ ಕುತ್ತಿಗೆ ಉಳುಕಿದ್ದರಿಂದ ಪೆವಿಲಿಯನ್ ಸೇರಿದರು. ದ.ಆಫ್ರಿಕಾ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಲು ಆರಂಭಿಸಿದರೂ ಕೆ.ಎಲ್.ರಾಹುಲ್(39), ರಿಷಭ್ ಪಂತ್(27) ಹಾಗೂ ರವೀಂದ್ರ ಜಡೇಜಾ(27) ಅಲ್ಪ ಹೋರಾಟ ನಡೆಸಿ ತಂಡಕ್ಕೆ ನೆರವಾದರು. ಧ್ರುವ್ ಜುರೆಲ್ 14, ಅಕ್ಷರ್ ಪಟೇಲ್ 16 ರನ್‌ಗೆ ಔಟಾದರೂ, ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಸಿಮೋನ್ ಹಾರ್ಮರ್ 4, ಮಾರ್ಕೊ ಯಾನ್ಸನ್ 3 ವಿಕೆಟ್ ಕಿತ್ತರು.
ಪೆವಿಲಿಯನ್ ಪರೇಡ್:
20 ರನ್‌ಗಳ ಹಿನ್ನಡೆ ಅನುಭವಿಸಿದ ದ.ಆಫ್ರಿಕಾ ಬಳಿಕ 2ನೇ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಕಂಡಿತು. 2ನೇ ಓವರ್‌ನಿಂದಲೇ ಸ್ಪಿನ್ ದಾಳಿ ಆರಂಭಿಸಿದ ಟೀಂ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ರಿಕೆಲ್ಟನ್‌ರನ್ನು ಕುಲ್ದೀಪ್ ಔಟ್ ಮಾಡಿದರೆ, ಬಳಿಕ ಕ್ರೀಸ್‌ಗೆ ಬಂದ ಮಾರ್ಕ್‌ರಮ್(4), ವಿಯಾನ್ ಮುಲ್ಡರ್(11), ಟೋನಿ ಡೆ ಜೊರ್ಜಿ(2), ಟ್ರಿಸ್ಟನ್ ಸ್ಟಬ್ಸ್(5)ಗೆ ಜಡೇಜಾ ಪೆವಿಲಿಯನ್ ಹಾದಿ ತೋರಿದರು. ಜಡೇಜಾ ಸ್ಪಿನ್ ದಾಳಿ ಮುಂದೆ ದ.ಆಫ್ರಿಕಾ ಅಕ್ಷರಶಃ ತತ್ತರಿಸಿತು. ಆದರೆ ನಾಯಕ ತೆಂಬಾ ಬವುಮಾ(ಔಟಾಗದೆ 29) ಏಕಾಂಗಿ ಹೋರಾಟ ನಡೆಸುತ್ತಿದ್ದು, 3ನೇ ದಿನ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬರುವ ವಿಶ್ವಾಸದಲ್ಲಿದ್ದಾರೆ. ಭಾರತದ ಪರ ಜಡೇಜಾ 4, ಕುಲ್ದೀಪ್ 3, ಅಕ್ಷರ್ 1 ವಿಕೆಟ್ ಪಡೆದರು.
ಸ್ಕೋರ್: ದ.ಆಫ್ರಿಕಾ 1ನೇ ಇನ್ನಿಂಗ್ಸ್ 159/10 ಮತ್ತು 2ನೇ ಇನ್ನಿಂಗ್ಸ್ 93/7(2ನೇ ದಿನದಂತ್ಯಕ್ಕೆ) (ಬವುಮಾ 29*, ಜಡೇಜಾ 4-29, ಕುಲ್ದೀಪ್ 2-12), ಭಾರತ 1ನೇ ಇನ್ನಿಂಗ್ಸ್ 189/10 (ರಾಹುಲ್ 39, ವಾಷಿಂಗ್ಟನ್ 29, ಪಂತ್ 27, ಜಡೇಜಾ 27, ಹಾರ್ಮರ್ 4-30, ಯಾನ್ಸನ್ 3-35)
ಅನಿರೀಕ್ಷಿತ ಬೌನ್ಸ್, ಟರ್ನ್: ಬ್ಯಾಟರ್ಸ್‌ಗೆ ಕಠಿಣ ಪರೀಕ್ಷೆ
ಕೋಲ್ಕತಾ ಪಿಚ್ ಮೊದಲ 2-3 ದಿನ ಬ್ಯಾಟರ್‌ಗಳಿಗೆ ನೆರವಾಗಲಿದೆ, ವೇಗದ ಜೊತೆ ರಿವರ್ಸ್ ಸ್ವಿಂಗ್ ಕೂಡಾ ಇರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ 2ನೇ ದಿನಕ್ಕೇ ಪಿಚ್ ವರ್ತನೆ ಬದಲಾಗಿದೆ. ಶನಿವಾರ ಅನಿರೀಕ್ಷಿತ ಬೌನ್ಸ್ ಹಾಗೂ ಟರ್ನ್ ಕಂಡುಬಂದಿದ್ದು, ಚೆಂಡನ್ನು ಎದುರಿಸಲು ಬ್ಯಾಟರ್‌ಗಳು ಪರದಾಡುವಂತಾಗಿದೆ. ಸ್ಪಿನ್ನರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದು, ಈ ಟೆಸ್ಟ್ 3ನೇ ದಿನವೇ ಕೊನೆಗೊಳ್ಳುವ ಸಾಧ್ಯತೆಯಿದೆ.
03ನೇ ಬಾರಿ
ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ 2 ತಂಡಗಳಿಂದಲೂ ಮೊದಲ ಇನ್ನಿಂಗ್ಸ್‌ನಲ್ಲಿ ವೈಯಕ್ತಿಕ ಅರ್ಧಶತಕ ದಾಖಲಾಗದೇ ಇರುವುದು ಇದು 3ನೇ ಬಾರಿ.
04ನೇ ಬೌಲರ್
ಭಾರತದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 250+ ವಿಕೆಟ್ ಕಿತ್ತ 4ನೇ ಬೌಲರ್ ಜಡೇಜಾ. ಅಶ್ವಿನ್ 383, ಕುಂಬ್ಳೆ 350, ಹರ್ಭಜನ್ 265 ವಿಕೆಟ್ ಪಡೆದಿದ್ದಾರೆ.
ಟೆಸ್ಟ್‌ನಲ್ಲಿ ಗರಿಷ್ಠ ಸಿಕ್ಸರ್: ಪಂತ್ ಭಾರತದ ನಂ.1
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರಿಷಭ್ ಪಂತ್ ಅಗ್ರಸ್ಥಾನಕ್ಕೇರಿದ್ದಾರೆ. ಶನಿವಾರ 2 ಸಿಕ್ಸರ್ ಬಾರಿಸಿದ ರಿಷಭ್, ಒಟ್ಟಾರೆ ಸಿಕ್ಸರ್ ಗಳಿಕೆಯನ್ನು 92ಕ್ಕೆ ಹೆಚ್ಚಿಸಿದರು. ಇದರೊಂದಿಗೆ ವಿರೇಂದ್ರ ಸೆಹ್ವಾಗ್(90 ಸಿಕ್ಸರ್) 2ನೇ ಸ್ಥಾನಕ್ಕೆ ಕುಸಿದರು. ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ರಿಷಭ್ ಈಗ 7ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 136 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತ ಪರ ಗರಿಷ್ಠ ಸಿಕ್ಸರ್
ಆಟಗಾರ ಪಂದ್ಯ ಸಿಕ್ಸರ್
ರಿಷಭ್ 48 92
ಸೆಹ್ವಾಗ್ 103 90
ರೋಹಿತ್ 67 88
ಜಡೇಜಾ 88 80
ಧೋನಿ 90 78
--
4000 ರನ್, 300 ವಿಕೆಟ್:
ಜಡೇಜಾ 4ನೇ ಕ್ರಿಕೆಟಿಗ
ಟೆಸ್ಟ್‌ನಲ್ಲಿ 4000ಕ್ಕೂ ಹೆಚ್ಚು ರನ್ ಹಾಗೂ 300ಕ್ಕೂ ಹೆಚ್ಚು ವಿಕೆಟ್ ಕಿತ್ತ ಭಾರತದ 2ನೇ ಹಾಗೂ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. ಅವರು 4000 ರನ್ ಹಾಗೂ 338 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್‌ನ ಇಯಾನ್ ಬೋಥಮ್(5200 ರನ್, 383 ವಿಕೆಟ್), ಕಪಿಲ್ ದೇವ್(5248 ರನ್, 434 ವಿಕೆಟ್) ಹಾಗೂ ನ್ಯೂಜಿಲೆಂಡ್‌ನ ವೆಟೋರಿ(4531 ರನ್, 362 ವಿಕೆಟ್) ಕೂಡಾ ಈ ಸಾಧನೆ ಮಾಡಿದ್ದಾರೆ.
-
ರಾಹುಲ್ 4000 ರನ್
ಕನ್ನಡಿಗ ಕೆ.ಎಲ್.ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ಭಾರತದ 18ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅವರು 66 ಪಂದ್ಯಗಳಲ್ಲಿ 52.17ರ ಸರಾಸರಿಯಲ್ಲಿ 4024 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ, 20 ಅರ್ಧಶತಕಗಳೂ ಒಳಗೊಂಡಿವೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಸಿಡಿಸಿದ 199 ರನ್, ಅವರ ಗರಿಷ್ಠ ಸ್ಕೋರ್.
;Resize=(690,390))
)
)


;Resize=(128,128))
;Resize=(128,128))