ದಿಗ್ಗಜ ಬೌಲರ್‌ ಆ್ಯಂಡರ್‌ಸನ್‌ ಟೆಸ್ಟ್‌ ವೃತ್ತಿ ಬದುಕು ಮುಕ್ತಾಯ

| Published : Jul 13 2024, 01:34 AM IST / Updated: Jul 13 2024, 04:49 AM IST

ಸಾರಾಂಶ

188 ಟೆಸ್ಟ್‌ ಆಡಿದ ಜೇಮ್ಸ್‌ ಆ್ಯಂಡರ್‌ಸನ್‌. 40000 ಎಸೆತ, 704 ವಿಕೆಟ್‌ ಸಾಧನೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಕಿತ್ತ ಏಕೈಕ ವೇಗಿ ಎಂಬ ಹೆಗ್ಗಳಿಕೆ

ಲಂಡನ್‌: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌ರ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕು ಮುಕ್ತಾಯಗೊಂಡಿದೆ. ವಿಂಡೀಸ್‌ ವಿರುದ್ಧ ಶುಕ್ರವಾರ ಅಂತ್ಯಗೊಂಡ ಮೊದಲ ಟೆಸ್ಟ್‌, ಆ್ಯಂಡರ್‌ಸನ್‌ರ ಕೊನೆಯ ಟೆಸ್ಟ್‌ ಆಗಿತ್ತು. 

188 ಟೆಸ್ಟ್‌ಗಳಲ್ಲಿ 704 ವಿಕೆಟ್‌ಗಳೊಂದಿಗೆ ಆ್ಯಂಡರ್‌ಸನ್‌ ತಮ್ಮ ಟೆಸ್ಟ್‌ ವೃತ್ತಿಬದುಕನ್ನು ಮುಕ್ತಾಯಗೊಳಿಸಿದ್ದಾರೆ. 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜಿಮ್ಮಿ, ಬರೋಬ್ಬರಿ 21 ವರ್ಷಗಳ ಕಾಲ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. 

ಸಚಿನ್‌ ತೆಂಡುಲ್ಕರ್‌ (200) ನಂತರ ಅತಿಹೆಚ್ಚು ಟೆಸ್ಟ್‌ಗಳನ್ನಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿರುವ ಆ್ಯಂಡರ್‌ಸನ್‌, 700 ವಿಕೆಟ್‌ ಮೈಲಿಗಲ್ಲು ಸಾಧಿಸಿದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 3ನೇ ಬೌಲರ್‌ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ. ಇದೇ ವೇಳೆ, ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಆ್ಯಂಡರ್‌ಸನ್‌ ಟೆಸ್ಟ್‌ನಲ್ಲಿ 40000 ಎಸೆತಗಳನ್ನೂ ಪೂರೈಸಿದರು. 

ಈ ಮೈಲಿಗಲ್ಲು ತಲುಪಿದ ಮೊದಲ ವೇಗಿ ಹಾಗೂ ಒಟ್ಟಾರೆ ಕೇವಲ 4ನೇ ಬೌಲರ್‌ ಎನ್ನುವ ಖ್ಯಾತಿಯನ್ನೂ ಗಳಿಸಿದರು. ಆ್ಯಂಡರ್‌ಸನ್‌ 194 ಏಕದಿನಗಳಲ್ಲಿ 269, 19 ಅಂ.ರಾ.ಟಿ20 ಪಂದ್ಯಗಳಲ್ಲಿ 18 ವಿಕೆಟ್‌ ಕಿತ್ತಿದ್ದಾರೆ. ಅಂ.ರಾ.ಕ್ರಿಕೆಟ್‌ನಲ್ಲಿ ಒಟ್ಟು 991 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದ್ದಾರೆ. 42 ವರ್ಷದ ಜಿಮ್ಮಿ ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಇನ್ನಷ್ಟು ದಿನ ಮುಂದುವರಿಯುವ ನಿರೀಕ್ಷೆ ಇದೆ.