ಆಲೂರಲ್ಲಿ ಕೆಎಸ್‌ಸಿಎ ಇಲೆವೆನ್‌ ಪರ ಆಡಿದ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್‌

| Published : Mar 16 2024, 01:52 AM IST / Updated: Mar 16 2024, 02:29 PM IST

ಸಾರಾಂಶ

ಇಂಗ್ಲೆಂಡ್‌ ಕೌಂಟಿ ತಂಡ ಸಸೆಕ್ಸ್‌ ಇತ್ತೀಚೆಗಷ್ಟೇ ಆಲೂರಿಗೆ ಬಂದಿದ್ದು, ಕೆಲ ದಿನ ಇಲ್ಲೇ ಅಭ್ಯಾಸ ನಡೆಸಲಿದೆ. ಗುರುವಾರ, ಶುಕ್ರವಾರ ನಡೆದ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಆರ್ಚರ್‌ ತಮ್ಮದೇ ತಂಡದ ವಿರುದ್ಧ ಕಣಕ್ಕಿಳಿದರು.

ಆಲೂರು: ಬೆಂಗಳೂರಿನ ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ನಡೆದ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ನ ತಾರಾ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಕೆಎಸ್‌ಸಿಎ ಇಲೆವೆನ್‌ ಪರ ಕಣಕ್ಕಿಳಿದರು. 

ಇತ್ತೀಚೆಗಷ್ಟೇ ಸಸೆಕ್ಸ್‌ ಕೌಂಟಿ ತಂಡ ನಗರಕ್ಕೆ ಆಗಮಿಸಿದ್ದು, ಕೆಎಸ್‌ಸಿಎ ಇಲೆವೆನ್‌ ವಿರುದ್ಧ ಅಭ್ಯಾಸ ಪಂದ್ಯವಾಡಿತು. ಆದರೆ ಪಂದ್ಯದ 2ನೇ ದಿನವಾದ ಶುಕ್ರವಾರ ಆರ್ಚರ್‌ ರಾಜ್ಯ ಸಂಸ್ಥೆಯ ತಂಡದ ಪರ ಆಡಿ ಸಸೆಕ್ಸ್‌ ಬ್ಯಾಟರ್‌ಗಳನ್ನು ಕಾಡಿದರು. 

ಅವರು 7 ಓವರ್‌ ಎಸೆದು 22 ರನ್‌ಗೆ 2 ವಿಕೆಟ್‌ ಕಿತ್ತರು. ಮೊದಲ ದಿನ ಕೆಎಸ್‌ಸಿಎ ತಂಡದ 201 ರನ್‌ಗೆ ಉತ್ತವಾಗಿ 2 ವಿಕೆಟ್‌ಗೆ 185 ರನ್‌ ಗಳಿಸಿದ್ದ ಸಸೆಕ್ಸ್‌, 365 ರನ್‌ಗೆ ಆಲೌಟಾಯಿತು. 

ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ಕೆಎಸ್‌ಸಿಎ ತಂಡ 4 ವಿಕೆಟ್‌ಗೆ 162 ರನ್‌ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು. ಪಂದ್ಯದ ಮೊದಲ ದಿನ ಡಿ.ನಿಶ್ಚಲ್‌ ಶತಕದ ಹೊರತಾಗಿಯೂ ಕೆಎಸ್‌ಸಿಎ ಇಲೆವೆನ್‌ 49.1 ಓವರ್‌ಗಳಲ್ಲಿ 201ಕ್ಕೆ ಆಲೌಟಾಗಿತ್ತು. 

ನಿಶ್ಚಲ್‌ 156 ಎಸೆತಗಳಲ್ಲಿ 107 ರನ್‌ ಗಳಿಸಿದ್ದರು. ಬಳಿಕ ಬ್ಯಾಟಿಂಗ್‌ ಆರಂಭಿಸಿದ್ದ ಸಸೆಕ್ಸ್‌ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 185 ರನ್‌ ಗಳಿಸಿ, ಕೇವಲ 16 ರನ್ ಹಿನ್ನಡೆಯಲ್ಲಿತ್ತು.