ಸಾರಾಂಶ
ಬಾರ್ಬಡೊಸ್: ದ.ಆಫ್ರಿಕಾ ವಿರುದ್ಧ ಸೋಲುವುದರೊಂದಿಗೆ ಸೂಪರ್-8 ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಗುರಿಯಾಗಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಮೆರಿಕ ವಿರುದ್ಧ ಅಮೋಘ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ಭಾನುವಾರದ ನಿರ್ಣಾಯಕ ಪಂದ್ಯದಲ್ಲಿ 10 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್, ಈ ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿತು. ಗುಂಪು-2ರಲ್ಲಿ ಇಂಗ್ಲೆಂಡ್ 4 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದು, ನೆಟ್ ರನ್‌ರೇಟ್(+1.992) ಉತ್ತಮವಾಗಿರುವುದರಿಂದ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಅಮೆರಿಕ 18.5 ಓವರ್‌ಗಳಲ್ಲಿ 115 ರನ್ ಕಲೆಹಾಕಿತು. ನಿತೀಶ್ ಕುಮಾರ್ 30, ಕೋರೆ ಆ್ಯಂಡರ್‌ಸನ್ 29 ರನ್ ಗಳಿಸಿದರು. 115ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ ಒಂದೂ ರನ್ ಸೇರಿಸದೆ ಆಲೌಟಾಯಿತು.
19ನೇ ಓವರಲ್ಲಿ ಜೊರ್ಡನ್ ಹ್ಯಾಟ್ರಿಕ್ ಸೇರಿ 4 ವಿಕೆಟ್ ಕಿತ್ತರು.ಸುಲಭ ಗುರಿಯನ್ನು ಇಂಗ್ಲೆಂಡ್ 9.4 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು. ಜೋಸ್ ಬಟ್ಲರ್ 38 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ನೊಂದಿಗೆ 83 ರನ್ ಚಚ್ಚಿದರೆ, ಸಾಲ್ಟ್ 25 ರನ್ ಗಳಿಸಿದರು.ಸ್ಕೋರ್: ಅಮೆರಿಕ 18.5 ಓವರ್‌ಗಳಲ್ಲಿ 115/10 (ನಿತೀಶ್ 30, ಜೊರ್ಡನ್ 4-10, ರಶೀದ್ 2-13), ಇಂಗ್ಲೆಂಡ್ 9.4 ಓವರಲ್ಲಿ 117/0 (ಬಟ್ಲರ್ 83*, ಸಾಲ್ಟ್ 25*) ಪಂದ್ಯಶ್ರೇಷ್ಠ: ಆದಿಲ್ ರಶೀದ್.