ಸಾರಾಂಶ
ನಾಸಿರ್ ಸಜಿಪ
ಬೆಂಗಳೂರು : "ಹೆಚ್ಚೇನೂ ಮೂಲಸೌಕರ್ಯಗಳಿಲ್ಲದ ಹಳಿಯಾಳ ತಾಲೂಕಿನ ಗಾಡ್ಗೀರಾ ಗ್ರಾಮದವನು ನಾನು. ಅಪ್ಪ-ಅಮ್ಮ ನಮ್ಮದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲೆಲ್ಲಾ ಕಬಡ್ಡಿ ಆಡೋಕೆ ಹೋಗಲು ಕಷ್ಟ ಆಗುತ್ತಿತ್ತು. ಆದರೆ ಪ್ರೊ ಕಬಡ್ಡಿ ನನಗೆ ಬದುಕು ಕೊಡುತ್ತಿದೆ. ನನಗೆ ಸೈನ್ಯಕ್ಕೆ ಸೇರಬೇಕೆಂಬ ಆಸೆಯಿದೆ. ಕಲಿಕೆ ಮುಗಿಸಿ ದೇಶ ಸೇವೆ ಮಾಡುವುದೇ ನನ್ನ ಮೊದಲ ಆದ್ಯತೆ "ಇದು 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್ ವಾರಿಯರ್ಸ್ ತಂಡದಲ್ಲಿ ಮಿಂಚುತ್ತಿರುವ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಿದ್ದಿ ಜನಾಂಗದ ಸುಶೀಲ್ ಕುಮಾರ್ ಕಾಂಬ್ರೇಕರ್ ಅವರ ಆತ್ಮವಿಶ್ವಾಸದ ಹಾಗೂ ಅದರ ಹಿಂದಿರುವ ಸಂಕಷ್ಟದ ಮಾತುಗಳು.
ಈಗಿನ್ನೂ ಡಿಗ್ರಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ 19 ವರ್ಷದ ಸುಶೀಲ್, ಪ್ರೊ ಕಬಡ್ಡಿಯಲ್ಲಿ ಆಡಿದ ಕೆಲವೇ ಪಂದ್ಯಗಳಲ್ಲೇ ತಮ್ಮ ಸಾಮರ್ಥ್ಯ ತೋರಿಸಿ, ಎಲ್ಲರ ಗಮನ ಸೆಳೆದಿದ್ದಾರೆ. ಸೈನಿಕನಾಗಿ ಶತ್ರುಗಳ ಸಂಹಾರ ಮಾಡುವ ಕನಸು ಹೊತ್ತುಕೊಂಡು, ಸದ್ಯ ಪ್ರೊ ಕಬಡ್ಡಿಯ ಅಂಕಣದಲ್ಲಿ ಎದುರಾಳಿ ಕೋಟೆಗೆ ನುಗ್ಗಿ ತೊಡೆ ತಟ್ಟುತ್ತಿರುವ ಸುಶೀಲ್, ತಮ್ಮ ಸಾಧನೆ ಹಾದಿ ಬಗ್ಗೆ ಕನ್ನಡಪ್ರಭ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.
ಕೈ ಹಿಡಿದ ಕಬಡ್ಡಿ: ಸುಶೀಲ್ ಬಾಲ್ಯದಲ್ಲೇ ಅಪ್ಪಟ ಅಥ್ಲೀಟ್. ಶಾಲಾ ದಿನಗಳಲ್ಲಿ ಓಟದ ಮೇಲೆ ಹೆಚ್ಚಿನ ಒಲವು. ಆದರೆ ಕಬಡ್ಡಿ ಆಡಿದರೆ ಭವಿಷ್ಯವಿದೆ ಎಂಬ ತಮ್ಮ ತಂದೆಯ ಮಾತು ಸುಶೀಲ್‌ರ ದಿಕ್ಕು ಬದಲಿಸಿತು. ಪಿಯುಸಿ ಕಲಿಯಲು ಮಂಗಳೂರು ಉಜಿರೆಯ ಎಸ್‌ಡಿಎಂ ಕಾಲೇಜು ಸೇರ್ಪಡೆಗೊಂಡ ಸುಶೀಲ್, ಕಬಡ್ಡಿಯಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಕಾಲೇಜು, ವಿಶ್ವವಿದ್ಯಾಲಯ, ಜಿಲ್ಲಾ, ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಗಳಲ್ಲಿ ಪಾಲ್ಗೊಂಡ ಸುಶೀಲ್ ಸೀಮಿತ ಅವಧಿಯಲ್ಲೇ ಎಲ್ಲರ ನೆಚ್ಚಿನ ರೈಡರ್ ಆಗಿ ಗುರುತಿಸಿಕೊಂಡರು. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿ, ಸೆಮಿಫೈನಲ್ ವರೆಗೂ ತಲುಪಿಸಿದ್ದು ಸುಶೀಲ್‌ರ ಮತ್ತೊಂದು ಹೆಗ್ಗಳಿಕೆ.ಕಳೆದ ಏಪ್ರಿಲ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಪ್ರಶಾಂತ್ ಸುರ್ವೆ ಕಣ್ಣಿಗೆ ಬಿದ್ದಿದ್ದೇ ಸುಶೀಲ್ ಬದುಕನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಬೆಂಗಾಲ್ ತಂಡ ಬೆಂಗಳೂರು ಹಾಗೂ ಚೆನ್ನೈನಲ್ಲಿ ನಡೆಸಿದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಸುಶೀಲ್ ''ನ್ಯೂ ಯಂಗ್ ಪ್ಲೇಯರ್'' ವಿಭಾಗದಲ್ಲಿ ಮುಖ್ಯ ತಂಡಕ್ಕೆ ಆಯ್ಕೆಯಾದರು.
ಬೆಂಗಾಲ್ ತಂಡದ ಆಪತ್ಬಾಂಧವ
ಈ ಬಾರಿ ಬೆಂಗಾಲ್ ತಂಡ 11 ಪಂದ್ಯಗಳನ್ನಾಡಿದ್ದು, ಈ ಪೈಕಿ ಸುಶೀಲ್ 9 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ''ಪ್ರೊ ಕಬಡ್ಡಿ ನೋಡಿಯೇ ಕಬಡ್ಡಿ ಆಡಬೇಕೆಂಬ ಆಸೆ ಹುಟ್ಟಿದ್ದು. ಈಗ ಪ್ರೊ ಕಬಡ್ಡಿಯಲ್ಲೇ ಆಡುತ್ತಿದ್ದೇನೆ. ಅದರಲ್ಲೂ ತಂಡದ ಆಡುವ 7ರಲ್ಲಿ ಸ್ಥಾನ ಸಿಗುತ್ತಿರುವುದಕ್ಕೆ ತುಂಬಾ ಖುಷಿಯಿದೆ. ತಂಡದ ಎಲ್ಲರಿಂದಲೂ ನನ್ನ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ'' ಎಂದು ಸುಶೀಲ್ ಹೇಳುವಾಗ ಅವರ ಮುಖದಲ್ಲಿ ಕಾಣುತ್ತಿದ್ದ ಖುಷಿಯನ್ನು ಅಕ್ಷರಗಳಲ್ಲಿ ವರ್ಣಿಸಲಾಗದು. ಈ ಸಲ 9 ಪಂದ್ಯಗಳಲ್ಲಿ ಸುಶೀಲ್ 40 ಅಂಕ ಸಂಪಾದಿಸಿದ್ದಾರೆ. ಸಂದಿಗ್ಧ ಘಟ್ಟದಲ್ಲಿ ಎದುರಾಳಿ ಅಂಕಣಕ್ಕೆ ನುಗ್ಗಿ ಅಗತ್ಯ ಅಂಕಗಳನ್ನು ದೋಚುವ ಕಲೆಯ ಮೂಲಕವೇ ಸುಶೀಲ್ ಈಗ ಎಲ್ಲರ ಫೇವರಿಟ್ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ದೇಶ ಸೇವೆಯೇ ಪ್ರಮುಖ ಗುರಿ
ಸುಶೀಲ್ ಈಗ ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿದ್ದರೂ ಸೈನ್ಯಕ್ಕೆ ಸೇರುವ ತಮ್ಮ ಬಯಕೆ ಕೈ ಬಿಟ್ಟಿಲ್ಲ. ಸದ್ಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎ ಡಿಗ್ರಿ ಓದುತ್ತಿರುವ ಸುಶೀಲ್ ಮುಂದೆ ಸೈನ್ಯಕ್ಕೆ ಸೇರುತ್ತೇನೆ ಎನ್ನುತ್ತಾರೆ. "ಸೈನಿಕನಾಗಬೇಕೆಂಬುದು ನನ್ನ ಜೀವನದ ದೊಡ್ಡ ಕನಸು. ದೇಶಕ್ಕಾಗಿ ಸೇವೆ ಸಲ್ಲಿಸಬೇಕೆಂಬ ಬಯಕೆಯಿದೆ. ಕಲಿಕೆ ಪೂರ್ಣಗೊಂಡ ಬಳಿಕ ಸೈನ್ಯಕ್ಕೆ ಸೇರುತ್ತೇನೆ. ಯೋಧನಾಗಿ ಕಾಣುವುದು ನನ್ನ ಕುಟುಂಬಸ್ಥರಿಗೂ ಆಸೆ ಇದೆ " ಎಂದು ಅಭಿಮಾನದಿಂದಲೇ ನುಡಿಯುತ್ತಾರೆ ಸುಶೀಲ್.
ಬೆಂಕಿಯಲ್ಲಿ ಅರಳಿದ ಹೂ ಸುಶೀಲ್
ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿರುವ ಸುಶೀಲ್‌ರ ತಂದೆ ಮೋಟೇಶ್ ಕಾಂಬ್ರೇಕರ್ ಒಬ್ಬ ಬಡ ರೈತ. ತಮ್ಮ 5 ಎಕರೆ ಹೊಲದಲ್ಲಿ ಮೆಕ್ಕೆ ಜೋಳ ಹಾಗೂ ಭತ್ತ ಬೆಳೆದು ಮಾರಾಟ ಮಾಡುತ್ತಿದ್ದಾರೆ. ಸರಿಯಾಗಿ ನೆಟ್ವರ್ಕ್, ಬಸ್ ವ್ಯವಸ್ಥೆ, ಕರೆಂಟ್ ಕೂಡಾ ಇವರ ಊರಲ್ಲಿಲ್ಲ. ತುರ್ತು ಅಗತ್ಯಗಳಿಗಾಗಿ ದೂರದ ಹಳಿಯಾಳಕ್ಕೆ ಬರಬೇಕು. ಆದರೆ ಕಬಡ್ಡಿ ಆಟಗಾರನಾಗಬೇಕೆಂದು ಸುಶೀಲ್ ಕಂಡ ಕನಸು, ಈಗ ಅವರನ್ನು ದೇಶ ಸುತ್ತುವಂತೆ ಮಾಡುತ್ತಿದೆ.
ನಮ್ಮೂರಿನಲ್ಲಿ ಕಬಡ್ಡಿ ಆಡುವವರು ಕಡಿಮೆ. ಈಗ ನಾನು ಪ್ರೊ ಕಬಡ್ಡಿಯಲ್ಲಿ ಆಡುತ್ತಿರುವುದು ನೋಡಿ ಅವರಿಗೆ ಅಭಿಮಾನ. ನಾನು ಕರ್ನಾಟಕ ಅಂಡರ್-19 ತಂಡಕ್ಕೆ ಆಡಿದ್ದೇನೆ. ಮುಂದೆ ಹಿರಿಯರ ತಂಡ, ಭಾರತ ತಂಡದ ಪರ ಆಡುವ ಬಯಕೆಯಿದೆ.
ಸುಶೀಲ್ ಕಾಂಬ್ರೇಕರ್, ಕಬಡ್ಡಿ ಆಟಗಾರ