2 ವರ್ಷಕ್ಕೇ ಕಿತ್ತು ಹೋದ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌!

| Published : Feb 25 2024, 01:51 AM IST / Updated: Feb 25 2024, 07:56 AM IST

ಸಾರಾಂಶ

ಟ್ರ್ಯಾಕ್‌ ಸಂಪೂರ್ಣ ಹಾಳಾದಾಗ 2019-20ರಲ್ಲಿ ಹೊಸ ಟ್ರ್ಯಾಕ್‌ ಅಳವಡಿಕೆ ಕಾರ್ಯ ಆರಂಭಗೊಂಡು, 2022ರ ಫೆಬ್ರವರಿಯಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿತ್ತು. ಆದರೆ ಟ್ರ್ಯಾಕ್‌ 7 ವರ್ಷ ಬಾಳಿಕೆ ಬರಲಿದೆ ಎಂಬ ಇಲಾಖೆಯ ಭರವಸೆ 2 ವರ್ಷದಲ್ಲೇ ಹುಸಿಯಾಗಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನಾಸಿರ್‌ ಸಜಿಪ

ಕನ್ನಡಪ್ರಭ ವಾರ್ತೆ ಬೆಂಗಳೂರು

3 ವರ್ಷಗಳ ದೀರ್ಘ ಕಾಯುವಿಕೆ ಬಳಿಕ 2022ರಲ್ಲಿ ಉದ್ಘಾಟನೆಗೊಂಡಿದ್ದ ನಗರದ ಕಂಠೀರವ ಕ್ರಿಡಾಂಗಣದಲ್ಲಿನ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ ಕೇವಲ ಎರಡೇ ವರ್ಷದಲ್ಲಿ ಮತ್ತೆ ಹಾನಿಗೊಳಗಾಗಿದೆ. 

ಹಲವು ವರ್ಷಗಳ ಬಾಳಿಕೆಯ ನಿರೀಕ್ಷೆಯಲ್ಲಿದ್ದ ಕ್ರೀಡಾಪಟುಗಳು ಹೊಸ ಟ್ರ್ಯಾಕ್‌ನ ಸ್ಥಿತಿಗತಿ ಬಗ್ಗೆ ಮತ್ತೆ ಆತಂಕಕ್ಕೊಳಗಾಗಿದ್ದು, ಟ್ರ್ಯಾಕ್‌ ನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸ ಟ್ರ್ಯಾಕ್‌ನಲ್ಲಿ 100 ಮೀ. ಓಟ ಆರಂಭಗೊಳ್ಳುವ ಸ್ಥಳದಲ್ಲಿ ಈಗಾಗಲೇ ಟ್ರ್ಯಾಕ್‌ ಸವೆದು ಹೋಗಿದೆ. ಇನ್ನೂ ಕೆಲವೆಡೆ ಟ್ರ್ಯಾಕ್‌ ಕಿತ್ತು ಬಂದಿದ್ದು, ಕೈಯಲ್ಲೇ ಟ್ರ್ಯಾಕ್‌ನ ತುಂಡುಗಳನ್ನು ತೆಗೆದುಕೊಳ್ಳುವ ಹಾಗಿದೆ. 

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದರೂ ಸಮರ್ಪಕ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಅಥ್ಲೀಟ್‌ಗಳ ದೂರು.

5 ಕೋಟಿ ರು. ವೆಚ್ಚದಲ್ಲಿ ಟ್ರ್ಯಾಕ್‌ ನಿರ್ಮಾಣಗೊಂಡಿದ್ದರೂ ಇಷ್ಟು ಬೇಗ ಟ್ರ್ಯಾಕ್‌ ಹಾಳಾಗಳು ಕಾರಣವೇನು ಎಂಬುದಕ್ಕೆ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ. 

ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ತನ್ನ ತವರಿನ ಪಂದ್ಯಗಳನ್ನು ಕಂಠೀರವದಲ್ಲೇ ಆಡುತ್ತಿದೆ.

ಹೀಗಾಗಿ ಮೈದಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಅಜಾಗರೂಕತೆಯಿಂದ ಟ್ರ್ಯಾಕ್‌ಗೆ ಹಾನಿಯಾಗಿದೆ ಎಂಬುದು ಅಥ್ಲೀಟ್ಸ್‌ಗಳ ಆರೋಪ.

ಇನ್ನು ಅಥ್ಲೀಟ್‌ಗಳಿಂದ ಟ್ರ್ಯಾಕ್‌ ಅತಿಯಾಗಿ ಬಳಕೆಯಾಗುತ್ತಿದ್ದು, ಈ ಕಾರಣದಿಂದಾಗಿ ಟ್ರ್ಯಾಕ್‌ ಹಾಳಾಗಿರಬಹುದು ಎನ್ನುವುದು ಕ್ರೀಡಾ ಇಲಾಖೆಯ ಸಮರ್ಥನೆ. 

ಫುಟ್ಬಾಲ್‌ ತಂಡದ ಸಿಬ್ಬಂದಿಯಿಂದಲೇ ಈ ಸಮಸ್ಯೆ ಆಗಿದೆ ಎಂದು ಹೇಳಲಾಗದು ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಟೀಕೆ ಬಳಿಕ ತೇಪೆ: ಟ್ರ್ಯಾಕ್‌ ಕಿತ್ತು ಹೋದ ಬಗ್ಗೆ ಅಥ್ಲೀಟ್‌ಗಳು ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತುಕೊಂಡ ಕ್ರೀಡಾ ಇಲಾಖೆ, ಟ್ರ್ಯಾಕ್‌ ಕಿತ್ತು ಹೋದ ಸ್ಥಳದಲ್ಲಿ ತೇಪೆ ಹಾಕಿದೆ. ಆದರೆ ಇದು ತಾತ್ಕಾಲಿಕ ಪರಿಹಾರವಾಗಿದ್ದು, ಮತ್ತೆ ಟ್ರ್ಯಾಕ್‌ ಕಿತ್ತು ಹೋಗುವ ಆತಂಕ ಅಥ್ಲೀಟ್‌ಗಳದ್ದು.

ಸಿಂಥೆಟಿಕ್‌ ಟ್ರ್ಯಾಕ್‌ ಹಲವು ಬಾರಿ ದುರಸ್ತಿ: ಕಂಠೀರವ ಕ್ರೀಡಾಂಗಣಲ್ಲಿ 1996-97ರಲ್ಲಿ ಮೊದಲ ಬಾರಿ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸಲಾಗಿತ್ತು. ಕೆಲ ವರ್ಷಗಳ ಬಳಿಕ ಟ್ರ್ಯಾಕ್‌ ಹಾಳಾಗಿದ್ದರಿಂದ 2006ರಲ್ಲಿ ದುರಸ್ತಿ ಕಾರ್ಯ ನಡೆಸಲಾಗಿತ್ತು. 

ಸರಿಯಾದ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದ ಟ್ರ್ಯಾಕ್‌ಗೆ 2013ರಲ್ಲಿ ತೇಪೆ ಹಾಕಲಾಗಿತ್ತು. ಆದರೆ 2018ರ ವೇಳೆಗೆ ಸಂಪೂರ್ಣವಾಗಿ ಹಾಳಾಗಿ ಗುಂಡಿ ಬಿದ್ದಿತ್ತು. 

‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿ ಕ್ರೀಡಾ ಇಲಾಖೆಯ ಮೇಲೆ ಒತ್ತಡ ಹೇರುವ ಕೆಲಸ ಮಾಡಿತ್ತು. 2019-20ರಲ್ಲಿ ಹೊಸ ಟ್ರ್ಯಾಕ್‌ ಅಳವಡಿಕೆ ಕಾರ್ಯ ಆರಂಭಗೊಂಡು, 2022ರ ಫೆಬ್ರವರಿಯಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಂಡಿತ್ತು. 

ಹೊಸ ಟ್ರ್ಯಾಕ್‌ 7 ವರ್ಷ ಬಾಳಿಕೆ ಬರಲಿದೆ ಎಂದು ಇಲಾಖೆ ತಿಳಿಸಿದ್ದರೂ, 2 ವರ್ಷಕ್ಕೇ ಹಾಳಾಗಿದ್ದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ಮುಂದೆ ಸಮಸ್ಯೆ ಆಗಲ್ಲ: ಕ್ರೀಡಾ ಇಲಾಖೆ
ಟ್ರ್ಯಾಕ್‌ ಹಾಳಾಗಿರುವ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಕ್ರೀಡಾ ಇಲಾಖೆ ಅಧಿಕಾರಿಗಳು, ಶೀಘ್ರವೇ ಟ್ರ್ಯಾಕ್‌ ಸರಿಪಡಿಸುತ್ತೇವೆ. ಮುಂದೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ. 

‘ಟ್ರ್ಯಾಕ್‌ ಹಾಳಾಗಿದ್ದು ಗಮನಿಸಿದ್ದೇವೆ. ಯಾವುದೇ ಅಥ್ಲೀಟ್‌ ಬಂದರೂ ಟ್ರ್ಯಾಕ್‌ನಲ್ಲೇ ಉಚಿತವಾಗಿ ಅಭ್ಯಾಸಕ್ಕೆ ಅವಕಾಶ ಕೊಟ್ಟಿರುವುದು ನಮ್ಮ ರಾಜ್ಯ ಮಾತ್ರ. 

ಪ್ರತಿನಿತ್ಯ ನೂರಾರು ಅಥ್ಲೀಟ್‌ಗಳು, ಕೋಚ್‌ಗಳು ಟ್ರ್ಯಾಕ್‌ ಬಳಸುತ್ತಾರೆ. ನಮ್ಮ ರಾಜ್ಯದ ಅಥ್ಲೀಟ್‌ಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಲಾಖೆಯ ಜವಾಬ್ದಾರಿ. ಇನ್ನು ಟ್ರ್ಯಾಕ್‌ನಲ್ಲಿ ಸಮಸ್ಯೆ ಆಗಲ್ಲ’ ಎಂದು ಭರವಸೆ ನೀಡಿದ್ದಾರೆ.

ಟ್ರ್ಯಾಕ್‌ ಗುಣಮಟ್ಟ ಕಾಪಾಡಬೇಕು: ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ದೇಶದಲ್ಲೇ ಅತ್ಯುತ್ತಮ ಟ್ರ್ಯಾಕ್‌ಗಳಲ್ಲಿ ಒಂದು. ಈ ಟ್ರ್ಯಾಕ್‌ಗೆ ಹಾನಿಯಾಗಿದ್ದು ನೋಡಿ ಆಘಾತವಾಯಿತು. ಕ್ರೀಡಾ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಟ್ರ್ಯಾಕ್‌ನ ಗುಣಮಟ್ಟ ಕಾಪಾಡಬೇಕು. -ಪ್ರಿಯಾ ಮೋಹನ್‌, ಅಂ.ರಾ. ಅಥ್ಲೀಟ್‌