ಕರ್ನಾಟಕ vs ಯುಪಿ ಪಂದ್ಯ ಡ್ರಾ: ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ನಾಕೌಟ್‌ ಹಾದಿ ಮತ್ತಷ್ಟು ಕಠಿಣ

| Published : Nov 17 2024, 01:17 AM IST / Updated: Nov 17 2024, 04:34 AM IST

ಸಾರಾಂಶ

ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿದ ರಾಜ್ಯ ತಂಡ ಒಟ್ಟು 12 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ.

ಲಖನೌ: ಈ ಬಾರಿ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ನಾಕೌಟ್‌ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಶನಿವಾರ ಕರ್ನಾಟಕ ಹಾಗೂ ಉತ್ತರ ಪ್ರದೇಶ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. 

ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿದ ರಾಜ್ಯ ತಂಡ ಒಟ್ಟು 12 ಅಂಕಗಳೊಂದಿಗೆ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಬಾಕಿಯಾಗಿದೆ. ತಂಡ ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 4 ಡ್ರಾ ಕಂಡಿದ್ದು, ಕೊನೆ 2 ಪಂದ್ಯಗಳಲ್ಲಿ ಗೆದ್ದು, ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಕ್ವಾರ್ಟರ್‌ ಫೈನಲ್‌ಗೇರಲಿದೆ.

ಮೊದಲ ಇನ್ನಿಂಗ್ಸಲ್ಲಿ 89 ರನ್‌ಗೆ ಆಲೌಟ್‌ ಆಗಿದ್ದ ಉ.ಪ್ರದೇಶ, 2ನೇ ಇನ್ನಿಂಗ್ಸಲ್ಲಿ 446 ರನ್‌ ಕಲೆಹಾಕಿತು. ಆದಿತ್ಯ ಶರ್ಮಾ 41, ಸೌರಭ್‌ ಕುಮಾರ್‌ 54 ರನ್‌ ಗಳಿಸಿ ರಾಜ್ಯಕ್ಕೆ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. ಗೆಲ್ಲಲು 261 ರನ್‌ ಗುರಿ ಬೆನ್ನತ್ತಿದ ಕರ್ನಾಟಕ 5 ವಿಕೆಟ್‌ಗೆ 178 ರನ್‌ ಗಳಿಸಿದ್ದಾಗ ಅಂಪೈರ್‌ಗಳು ಪಂದ್ಯ ಡ್ರಾ ಎಂದು ಘೋಷಿಸಿದರು. ನಿಕಿನ್‌ ಜೋಸ್‌ 48, ಮಯಾಂಕ್‌ ಅಗರ್‌ವಾಲ್‌ 37, ಮನೀಶ್‌ ಪಾಂಡೆ ಔಟಾಗದೆ 36, ಅಭಿನವ್‌ ಮನೋಹರ್‌ ಔಟಾಗದೆ 31 ರನ್‌ ಗಳಿಸಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 275ಕ್ಕೆ ಆಲೌಟಾಗಿ, 186 ರನ್‌ ಮುನ್ನಡೆ ಪಡೆದಿತ್ತು. 

ರಣಜಿಗೆ ಇನ್ನು 2 ತಿಂಗಳು ಬಿಡುವು

2024-25ರ ರಣಜಿ ಟ್ರೋಫಿ ಮೊದಲ 5 ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿವೆ. ಇನ್ನು 2 ತಿಂಗಳು ಟೂರ್ನಿಗೆ ಬಿಡುವು. ಮುಂದಿನ ವಾರದಿಂದ ರಾಜ್ಯ ತಂಡಗಳು ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಆಡಲಿದ್ದು, ಬಳಿಕ ಜ.23ರಿಂದ ಮತ್ತೆ ರಣಜಿ ಪಂದ್ಯಗಳು ಶುರುವಾಗಲಿವೆ.