ಐಪಿಎಲ್‌ಗೆ ಸಜ್ಜಾಗುತ್ತಿರುವ ಕರ್ನಾಟಕದ ಕ್ರಿಕೆಟಿಗರು

| N/A | Published : Aug 18 2025, 12:24 PM IST

cricket

ಸಾರಾಂಶ

ಮಹಾರಾಜ ಟ್ರೋಫಿ: ಬ್ಯಾಟಿಂಗ್‌ನಲ್ಲಿ ಸ್ಮರಣ್‌, ಲುವ್‌ನಿತ್, ಚೇತನ್‌, ಮೊಹಮದ್‌ ತಾಹ, ಮ್ಯಾಕ್ನಿಲ್‌ ನೊರೊನ್ಹಾ ಅತ್ಯಾಕರ್ಷಕ ಆಟಬೌಲಿಂಗ್‌ನಲ್ಲಿ ಕ್ರಾಂತಿ, ಮೊಹ್ಸಿನ್‌ ಮಾರಕ ದಾಳಿ । ಸಿಕ್ಕ ಅವಕಾಶವನ್ನು ಬಳಸಿಕೊಂಡು ಗಮನ ಸೆಳೆಯುತ್ತಿರುವ ಯುವ ಸ್ಟಾರ್‌ಗಳು

  ಬೆಂಗಳೂರು :  ಯುವ, ಪ್ರತಿಭಾವಂತ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಲು ವೇದಿಕೆ ಒದಗಿಸಿಕೊಡುವ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿ ಈ ಬಾರಿಯೂ ಹಲವು ಸ್ಟಾರ್‌ಗಳನ್ನು ಸೃಷ್ಟಿಸುತ್ತಿದೆ. ಈಗಾಗಲೇ ಕ್ರಿಕೆಟ್‌ನಲ್ಲಿ ಮಿಂಚಿರುವ ಮತ್ತು ಹೊಸದಾಗಿ ತಮ್ಮ ಪ್ರತಿಭೆ ತೋರ್ಪಡಿಸುತ್ತಿರುವ ಹಲವು ಕ್ರಿಕೆಟಿಗರು ಮೈಸೂರಿನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್‌ಗೆ ಸಜ್ಜಾಗುವುದರ ಜತೆಗೆ ಭಾರತ ತಂಡದ ಕದ ತಟ್ಟಲು ಶುರು ಮಾಡಿದ್ದಾರೆ. ಈ ಪೈಕಿ ಪ್ರಮುಖರ ವಿವರ ಇಲ್ಲಿದೆ.

ರವಿಚಂದ್ರನ್‌ ಸ್ಮರಣ್‌

ಕಳೆದ ಬಾರಿ ರಣಜಿಯಲ್ಲಿ 612 ರನ್‌, ವಿಜಯ್‌ ಹಜಾರೆ ಏಕದಿನದ 7 ಇನ್ನಿಂಗ್ಸ್‌ಗಳಲ್ಲಿ 433 ರನ್‌ ಕಲೆಹಾಕಿದ್ದ 22 ವರ್ಷದ ಎಡಗೈ ಬ್ಯಾಟರ್‌ ಆರ್‌.ಸ್ಮರಣ್‌ ಈ ಬಾರಿ ಮಹಾರಾಜ ಟ್ರೋಫಿಯಲ್ಲೂ ಮಿಂಚುತ್ತಿದ್ದಾರೆ. ಗುಲ್ಬರ್ಗಾ ಪರ ಆಡುತ್ತಿರುವ ಸ್ಮರಣ್‌, ಮೈಸೂರು ವಿರುದ್ಧ ಕೇವಲ 22 ಎಸೆತಗಳಲ್ಲಿ 55 ರನ್‌ ಗಳಿಸಿ ಅಬ್ಬರಿಸಿದ್ದರು. ಸಿಕ್ಸರ್‌ ಬಾರಿಸುವ ಕೌಶಲ್ಯದ ಮೂಲಕ ಗಮನ ಸೆಳೆಯುತ್ತಿರುವ ಅವರು, ಮುಂದೆ ಐಪಿಎಲ್‌ನಲ್ಲೂ ಅವಕಾಶ ಗಿಟ್ಟಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಕಳೆದ ಬಾರಿ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ಗೆ ಸೇರ್ಪಡೆಗೊಂಡಿದ್ದರೂ, ಬಳಿಕ ಗಾಯದಿಂದ ಹೊರಬಿದ್ದಿದ್ದರು.

ಶುಭಾಂಗ್‌ ಹೆಗ್ಡೆ

ಕರ್ನಾಟಕದ 24 ವರ್ಷದ ಭರವಸೆಯ ಆಟಗಾರ ಶುಭಾಂಗ್‌ ಹೆಗ್ಡೆ ಈ ಬಾರಿಯೂ ಆಲ್ರೌಂಡ್‌ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ಶುಭಾಂಗ್‌, 4 ಪಂದ್ಯಗಳಲ್ಲಿ 8 ವಿಕೆಟ್‌ ಪಡೆದಿದ್ದಾರೆ. ಶಿವಮೊಗ್ಗ ವಿರುದ್ಧ ಪಂದ್ಯದಲ್ಲಿ ಕೇವಲ 7 ರನ್‌ಗೆ 3 ವಿಕೆಟ್‌ ಕಬಳಿಸುವುದರ ಜೊತೆಗೆ 4 ಎಸೆತಕ್ಕೆ 14 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದ್ದರು.

ಎಲ್‌.ಆರ್‌.ಚೇತನ್‌

ಕಳೆದ ಬಾರಿ ಮಹಾರಾಜ ಟ್ರೋಫಿ ಹರಾಜಿನ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದ ಸ್ಫೋಟಕ ಬ್ಯಾಟರ್‌ ಎಲ್‌.ಆರ್‌.ಚೇತನ್‌ ಈ ಬಾರಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಗುಲ್ಬರ್ಗಾ ವಿರುದ್ಧ ಪಂದ್ಯದಲ್ಲಿ ಔಟಾಗದೆ 78 ರನ್‌ ಗಳಿಸಿದ್ದ ಚೇತನ್‌, ಭಾನುವಾರ ಮಂಗಳೂರು ವಿರುದ್ಧ 74 ರನ್‌ ಚಚ್ಚಿದ್ದರು. ಯಾವುದೇ ತಂಡಕ್ಕೆ ಆಸ್ತಿಯಾಗಬಲ್ಲ ಉತ್ತಮ ಆರಂಭಿಕ ಆಟಗಾರರಾಗಿರುವ ಚೇತನ್ ಮೇಲೆ ಐಪಿಎಲ್‌ ತಂಡಗಳು ಕಣ್ಣಿಡಬೇಕಾದ ಅಗತ್ಯವಿದೆ.

ಮೊಹಮ್ಮದ್‌ ತಾಹ

ಈ ಬಾರಿ ಹುಬ್ಬಳ್ಳಿ ಪರ ಆರಂಭಿಕ 2 ಪಂದ್ಯಗಳಲ್ಲೂ ಶತಕ ಬಾರಿಸಿರುವ ಮೊಹಮ್ಮದ್‌ ತಾಹ, ತಮ್ಮ ಪ್ರತಿಭೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ವಯಸ್ಸು 31 ಆಗಿದ್ದರೂ ಇನ್ನೂ ಕೆಲ ವರ್ಷ ಆಡಬಲ್ಲ ಸಾಮರ್ಥ್ಯವಿದೆ. ಸ್ಫೋಟಕ ಆಟವಾಡುವ ತಾಹ ಮುಂದಿನ ಐಪಿಎಲ್‌ನಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಕ್ರಾಂತಿ ಕುಮಾರ್‌

ಮಂಗಳೂರು ಪರ ಆಡುತ್ತಿರುವ ಕ್ರಾಂತಿ ಕುಮಾರ್‌ ಆಲ್ರೌಂಡರ್‌ಗಳ ಸಾಲಲ್ಲಿ ಕ್ರಾಂತಿ ಸೃಷ್ಟಿಸುತ್ತಿದ್ದಾರೆ. ಈ ಸಲ ಟೂರ್ನಿಯ 3 ಪಂದ್ಯಗಳ ಪೈಕಿ 2ರಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 12 ವಿಕೆಟ್‌(ಕ್ರಮವಾಗಿ 3, 5, 4) ಪಡೆದಿರುವ ಅವರು, ಹುಬ್ಬಳ್ಳಿ ವಿರುದ್ಧ 9 ಎಸೆತಗಳಲ್ಲೇ 30 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು.

ಮ್ಯಾಕ್ನಿಲ್‌ ನೊರೊನ್ಹಾ

24 ವರ್ಷದ ಬಲಗೈ ಬ್ಯಾಟರ್‌ ಮ್ಯಾಕ್ನಿಲ್‌ ನೊರೊನ್ಹಾ ಸ್ಫೋಟಕ ಆಟಗಾರ. ಗುಲ್ಬರ್ಗಾ ವಿರುದ್ಧ 28 ಎಸೆತಗಳಲ್ಲೇ 53 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದ್ದ ಮ್ಯಾಕ್ನಿಲ್‌, ಹುಬ್ಬಳ್ಳಿ ವಿರುದ್ಧವೂ ಅರ್ಧಶತಕ ಸಿಡಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಅವರ ಮೇಲೆ ಕೆಲ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಮುಂದೆ ಐಪಿಎಲ್, ಕರ್ನಾಟಕ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಕಾತರದಲ್ಲಿದ್ದಾರೆ.

ಲುವ್‌ನಿತ್ ಸಿಸೋಡಿಯಾ

ಈಗಾಗಲೇ ಆರ್‌ಸಿಬಿ ಹಾಗೂ ಕೆಕೆಆರ್‌ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ 25 ವರ್ಷದ ಲುವ್‌ನಿತ್‌ ಸಿಸೋಡಿಯಾ ಮುಂಬರುವ ಐಪಿಎಲ್‌ಗಳಲ್ಲಿ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಡುವುದು ಲುವ್‌ನಿತ್‌ರ ವಿಶೇಷತೆ. 160-180ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುವ ಅವರು, ಶಿವಮೊಗ್ಗ ವಿರುದ್ಧ ಪಂದ್ಯದಲ್ಲಿ 24 ಎಸೆತಗಳಲ್ಲೇ ಔಟಾಗದೆ 58 ರನ್‌ ಸಿಡಿಸಿ ಗುಲ್ಬರ್ಗಾವನ್ನು ಗೆಲ್ಲಿಸಿದ್ದರು.

ಮೊಹ್ಸಿನ್‌ ಖಾನ್‌

ಕರ್ನಾಟಕ ತಂಡ ಯುವ ಸ್ಪಿನ್ನರ್‌ಗಳ ಕೊರತೆ ಎದುರಿಸುತ್ತಿದ್ದು, ಇದನ್ನು ತುಂಬಬಲ್ಲ ಆಟಗಾರರ ಪಟ್ಟಿಯಲ್ಲಿ ಮೊಹ್ಸಿನ್ ಖಾನ್‌ ಕೂಡಾ ಒಬ್ಬರು. ತಮ್ಮ ಸ್ಪಿನ್‌ ಕೈಚಳಕದ ಮೂಲಕವೇ ಗಮನ ಸೆಳೆಯುತ್ತಿರುವ 21 ವರ್ಷದ ಮೊಹ್ಸಿನ್, ಈ ಬಾರಿ 5 ಪಂದ್ಯಗಳಲ್ಲಿ 8 ವಿಕೆಟ್‌ ಪಡೆದಿದ್ದಾರೆ. ಉತ್ತಮ ಎಕಾನಮಿ ರೇಟ್‌ ಕೂಡಾ ಕಾಯ್ದುಕೊಳ್ಳುತ್ತಿರುವ ಅವರು ಮುಂದೆ ರಾಜ್ಯ ತಂಡದ ಪರ ಮಿಂಚುವ ಭರವಸೆ ಮೂಡಿಸಿದ್ದಾರೆ.

Read more Articles on