ಸಾರಾಂಶ
ಸ್ವಾಮಿ ವಿವೇಕಾನಂದ ಅಂಡರ್-20 ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಫೈನಲ್‌ಗೆ ಕರ್ನಾಟಕ ಲಗ್ಗೆ. ನಾಳೆ (ಬುಧವಾರ) ಫೈನಲ್‌ನಲ್ಲಿ ಡೆಲ್ಲಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿರುವ ಕರ್ನಾಟಕ.
ನರೈನ್‌ಪುರ(ಛತ್ತೀಸ್‌ಗಢ): ಸ್ವಾಮಿ ವಿವೇಕಾನಂದ ಅಂಡರ್-20 ಪುರುಷರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಲ್ಲಿ ಕರ್ನಾಟಕ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.
ಏ.12ರಂದು ಆರಂಭಗೊಂಡಿದ್ದ ಟೂರ್ನಿಯಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿದಿದ್ದವು. ಸೋಮವಾರ ಸೆಮಿಫೈನಲ್ ಪಂದ್ಯಗಳು ನಡೆದವು. ಕರ್ನಾಟಕ ತಂಡ ಬಲಿಷ್ಠ ಮಣಿಪುರ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿತು. ಬೋರಿಶ್ ಸಿಂಗ್ 14ನೇ ನಿಮಿಷದಲ್ಲಿ ಗೋಲು ಬಾರಿಸಿ ರಾಜ್ಯದ ಗೆಲುವಿಗೆ ಕಾರಣರಾದರು. ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಕರ್ನಾಟಕ, 5 ಪಂದ್ಯಗಳಲ್ಲಿ ಬರೋಬ್ಬರಿ 20 ಗೋಲು ಬಾರಿಸಿದ್ದು, ಕೇವಲ 1 ಗೋಲು ಬಿಟ್ಟುಕೊಟ್ಟಿದೆ.
ಬುಧವಾರ ಫೈನಲ್ ನಡೆಯಲಿದ್ದು, ಕರ್ನಾಟಕಕ್ಕೆ ಡೆಲ್ಲಿ ಸವಾಲು ಎದುರಾಗಲಿದೆ. ಸೋಮವಾರ ನಡೆದ 2ನೇ ಸೆಮಿಫೈನಲ್‌ನಲ್ಲಿ ಡೆಲ್ಲಿ 3-2 ಗೋಲುಗಳಿಂದ ಮಿಜೋರಾಮ್ ವಿರುದ್ಧ ಜಯ ಸಾಧಿಸಿತು.