ಸಿ.ಕೆ.ನಾಯ್ಡು ಫೈನಲ್‌: ಯುಪಿ ವಿರುದ್ಧ ಕರ್ನಾಟಕಕ್ಕೆ 663 ರನ್‌ ಲೀಡ್‌

| Published : Mar 13 2024, 02:02 AM IST

ಸಾರಾಂಶ

ಫೈನಲ್ ಪಂದ್ಯ ಬುಧವಾರ ಕೊನೆಗೊಳ್ಳಲಿದೆ. ಒಂದು ವೇಳೆ ಪಂದ್ಯ ಫಲಿತಾಂಶ ಸಿಗದೆ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ಚಾಂಪಿಯನ್ ಎನಿಸಿಕೊಳ್ಳಲಿದೆ.

ಬೆಂಗಳೂರು: ಸಿ.ಕೆ.ನಾಯ್ಡು ಟ್ರೋಫಿ ಅಂಡರ್‌-23 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ಕರ್ನಾಟಕ ದಿಟ್ಟ ಹೆಜ್ಜೆ ಇರಿಸಿದೆ. ಉತ್ತರ ಪ್ರದೇಶ ವಿರುದ್ಧ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಕರ್ನಾಟಕ 663 ರನ್‌ಗಳ ಬೃಹತ್‌ ಮುನ್ನಡೆ ಪಡೆದಿದ್ದು, ಗೆಲ್ಲುವುದು ಬಹುತೇಕ ಖಚಿತವಾಗಿದೆ. ಬುಧವಾರ ಪಂದ್ಯದ ಕೊನೆ ದಿನವಾಗಿದ್ದು, ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಕರ್ನಾಟಕ ಚಾಂಪಿಯನ್‌ ಎನಿಸಿಕೊಳ್ಳಲಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್‌ಗಳ ದೊಡ್ಡ ಮುನ್ನಡೆ ಪಡೆದ್ದಿದ್ದ ಕರ್ನಾಟಕ ತಂಡ ಸದ್ಯ 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 444 ರನ್ ಕಲೆಹಾಕಿದೆ.2ನೇ ದಿನ ವಿಕೆಟ್‌ ನಷ್ಟವಿಲ್ಲದೆ 91 ರನ್‌ ಗಳಿಸಿದ್ದ ರಾಜ್ಯ ತಂಡ ಮಂಗಳವಾರವೂ ಯುಪಿ ಬೌಲರ್‌ಗಳನ್ನು ಚೆಂಡಾಡಿತು. ಮೊದಲ ವಿಕೆಟ್‌ಗೆ 144 ರನ್‌ ಜೊತೆಯಾಟವಾಡಿ ಪ್ರಖರ್‌ ಚತುರ್ವೇದಿ 86, ಮೆಕ್‌ನೀಲ್‌ 79 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅನೀಶ್‌ ಕೆ.ವಿ. ಎದುರಾಳಿ ತಂಡದ ಮೇಲೆ ಸವಾರಿ ಮಾಡಿದರು. ಅವರು 221 ಎಸೆತಗಳಲ್ಲಿ 18 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 171 ರನ್‌ ಕಲೆ ಹಾಕಿದ್ದಾರೆ. ನಾಯಕ ಸ್ಮರಣ್‌ 40 ರನ್‌ ಕೊಡುಗೆ ನೀಡಿದರು.ಸ್ಕೋರ್‌: ಕರ್ನಾಟಕ 358/10 ಮತ್ತು 444/5(3ನೇ ದಿನದಂತ್ಯಕ್ಕೆ) (ಅನೀಶ್‌ 171*, ಪ್ರಖರ್‌ 86, ಮೆಕ್‌ನೀಲ್‌ 79, ರಿತುರಾಜ್‌ 1-38), ಉತ್ತರ ಪ್ರದೇಶ 139/10