ಸೆಮೀಸ್‌ಗೇರಲು ಕರ್ನಾಟಕ ದಿಟ್ಟ ಹೋರಾಟ!

| Published : Feb 27 2024, 01:30 AM IST / Updated: Feb 27 2024, 10:56 AM IST

ಸಾರಾಂಶ

ದಶಕದ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಇನ್ನೂ ಜೀವಂತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಹೊರತಾಗಿಯೂ ಬೌಲರ್‌ಗಳ ಮಾರಕ ದಾಳಿ, ಬ್ಯಾಟರ್‌ಗಳ ಸುಧಾರಿತ ಆಟದಿಂದಾಗಿ ರಾಜ್ಯ ತಂಡ ವಿದರ್ಭ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಲು ದಿಟ್ಟ ಹೋರಾಟ ನಡೆಸುತ್ತಿದೆ.

ನಾಗ್ಪುರ: ದಶಕದ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಇನ್ನೂ ಜೀವಂತವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಹೊರತಾಗಿಯೂ ಬೌಲರ್‌ಗಳ ಮಾರಕ ದಾಳಿ, ಬ್ಯಾಟರ್‌ಗಳ ಸುಧಾರಿತ ಆಟದಿಂದಾಗಿ ರಾಜ್ಯ ತಂಡ ವಿದರ್ಭ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಲು ದಿಟ್ಟ ಹೋರಾಟ ನಡೆಸುತ್ತಿದೆ. 

ಅಸಾಧಾರಣ ಪ್ರದರ್ಶನದ ಮೂಲಕ ಕೊನೆ ದಿನವಾದ ಮಂಗಳವಾರ ಪಂದ್ಯ ಗೆಲ್ಲುವುದು ರಾಜ್ಯ ತಂಡದ ಮುಂದಿರುವ ಗುರಿ.ವಿದ್ವತ್‌ ಕಾವೇರಪ್ಪ ಹಾಗೂ ವೈಶಾಖ್‌ರ ಮಾರಕ ಬೌಲಿಂಗ್‌ ನೆರವಿನಿಂದ ವಿದರ್ಭವನ್ನು 2ನೇ ಇನ್ನಿಂಗ್ಸ್‌ನಲ್ಲಿ 196 ರನ್‌ಗೆ ಕಟ್ಟಿಹಾಕಿತು. 

371 ರನ್‌ ಗೆಲುವಿನ ಗುರಿ ಬೆನ್ನಟ್ಟಿರುವ ರಾಜ್ಯ 4ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 103 ರನ್‌ ಗಳಿಸಿದ್ದು, ಇನ್ನೂ 268 ರನ್‌ ಅಗತ್ಯವಿದೆ.ಮೊದಲ ಇನ್ನಿಂಗ್ಸ್‌ನಲ್ಲಿ 174 ರನ್‌ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ವಿದರ್ಭ 3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಗಳಿಸಿತ್ತು.

4ನೇ ದಿನದಾಟ ಆರಂಭಿಸಿದ ವಿದರ್ಭವನ್ನು ಸೋಮವಾರ ರಾಜ್ಯದ ವೇಗಿಗಳು ಕಾಡಿದರು. ಧ್ರುವ್‌ ಶೋರೆ 57 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 93. ಅವರ ನಿರ್ಗಮನದ ಬಳಿಕ ರಾಜ್ಯ ತಂಡ ಪ್ರಾಬಲ್ಯ ಸಾಧಿಸಿತು. 

ಉತ್ತಮ ಆರಂಭದ ಹೊರತಾಗಿಯೂ ಕೊನೆಯಲ್ಲಿ 103 ರನ್‌ ಸೇರಿಸುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡಿತು. ರಾಜ್ಯದ ಮಾಜಿ ಆಟಗಾರ ಕರುಣ್‌ ನಾಯರ್‌(34) ಕೊಂಚ ಪ್ರತಿರೋಧ ತೋರಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವೈಶಾಕ್‌ ಬಿಡಲಿಲ್ಲ. 

ಆದಿತ್ಯ ಸರ್ವಾಟೆ 29 ರನ್‌ ಕೊಡುಗೆ ನೀಡಿದರು. ವಿದ್ವತ್‌ 6, ವೈಶಾಕ್‌ 4 ವಿಕೆಟ್‌ ಕಿತ್ತರು.ಅಬ್ಬರದ ಆಟ: ದೊಡ್ಡ ಗುರಿ ಬೆನ್ನತ್ತಿದ ಕರ್ನಾಟಕ ಗೆಲುವೊಂದೇ ಮಂತ್ರ ಎಂಬಂತೆ ಅಬ್ಬರದ ಆಟಕ್ಕೆ ಒತ್ತುಕೊಟ್ಟಿತು. 

ನಾಯಕ ಮಯಾಂಕ್‌ ಅಗರ್‌ವಾಲ್‌ ಹಾಗೂ ಆರ್‌.ಸಮರ್ಥ್‌(40) ಮೊದಲ ವಿಕೆಟ್‌ಗೆ 101 ರನ್ ಜೊತೆಯಾಟವಾಡಿದರು. 61 ರನ್‌ ಗಳಿಸಿರುವ ಮಯಾಂಕ್‌ ಕ್ರೀಸ್‌ನಲ್ಲಿದ್ದು, ರಾಜ್ಯ ತಂಡಕ್ಕೆ ಗೆಲುವು ತಂದುಕೊಡಲು ಹೋರಾಡುತ್ತಿದ್ದಾರೆ. 

ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ ಮಯನ್ನಡೆ ಆಧಾರದಲ್ಲಿ ವಿದರ್ಭ ಸೆಮೀಸ್‌ಗೇರಲಿದೆ.

ಸ್ಕೋರ್‌: ವಿದರ್ಭ 460/10 ಮತ್ತು 196/10( ಧ್ರುವ್‌ 57, ಕರುಣ್‌ 34, ವಿದ್ವತ್‌ 6-61, 4-81), ಕರ್ನಾಟಕ 286/10 ಮತ್ತು 103/1(3ನೇ ದಿನದಂತ್ಯಕ್ಕೆ) (ಮಯಾಂಕ್‌ 61*, ಸಮರ್ಥ್ 40, ಆದಿತ್ಯ 1-10)

ಸೆಮಿ ಫೈನಲ್‌ಗೇರಿದ ಮಧ್ಯಪ್ರದೇಶ
ರಣಜಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಂಧ್ರ ವಿರುದ್ಧ 4 ರನ್‌ ರೋಚಕ ಜಯ ಸಾಧಿಸಿದ ಮಧ್ಯಪ್ರದೇಶ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್‌ ಗಳಿಸಿದ್ದ ಮಧ್ಯ ಪ್ರದೇಶ, ಆಂಧ್ರವನ್ನು 172 ರನ್‌ಗೆ ಕಟ್ಟಿಹಾಕಿ 62 ರನ್‌ ಮುನ್ನಡೆ ಪಡೆದಿತ್ತು. 

2ನೇ ಇನ್ನಿಂಗ್ಸ್‌ನಲ್ಲಿ ಮಧ್ಯಪ್ರದೇಶಕ್ಕೆ 107ಕ್ಕೆ ಆಲೌಟಾಗಿತ್ತು. 170 ರನ್‌ ಗುರಿ ಪಡೆದಿದ್ದ ಆಂಧ್ರ 165ಕ್ಕೆ ಆಲೌಟಾಯಿತು. ಅನುಭವ್‌ ಅಗರ್‌ವಾಲ್‌ 6 ವಿಕೆಟ್‌ ಕಿತ್ತರು.

ಮತ್ತೊಂದು ಕ್ವಾರ್ಟರ್‌ನಲ್ಲಿ ಬರೋಡಾ ವಿರುದ್ಧ ಮುಂಬೈ 2ನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗೆ 379 ರನ್‌ ಗಳಿಸಿದ್ದು, ಒಟ್ಟು 415 ರನ್‌ ಮುನ್ನಡೆ ಪಡೆದಿದೆ.