ಕರ್ನಾಟಕ ಚೊಚ್ಚಲ ಬಾರಿ ಸಿ.ಕೆ.ನಾಯ್ಡು ಟ್ರೋಫಿ ಚಾಂಪಿಯನ್‌

| Published : Mar 14 2024, 02:02 AM IST

ಸಾರಾಂಶ

ಫೈನಲ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಗೆಲುವು. 805 ರನ್‌ ಗುರಿ ಬೆನ್ನತ್ತಿದ ಯುಪಿ 2ನೇ ಇನ್ನಿಂಗ್ಸಲ್ಲಿ 176/6. ಯುಪಿಯ 2ನೇ ಟ್ರೋಫಿ ಗೆಲ್ಲುವ ಕನಸು ಭಗ್ನ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿ.ಕೆ.ನಾಯ್ಡು ಅಂಡರ್‌-23 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಚೊಚ್ಚಲ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2007ರ ಚೊಚ್ಚಲ ಆವೃತ್ತಿಯಿಂದಲೂ ಪ್ರಶಸ್ತಿ ಗೆಲ್ಲಲು ಕಾಯುತ್ತಿರುವ ರಾಜ್ಯ ತಂಡ ಈ ಬಾರಿ ತವರಿನ ಅಂಗಳದಲ್ಲೇ ಟ್ರೋಫಿ ಬರ ನೀಗಿಸಿತು.ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಪಂದ್ಯದಲ್ಲಿ ರಾಜ್ಯ ತಂಡ ಉತ್ತರ ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಗೆಲುವು ಸಾಧಿಸಿತು. 2014-17ರ ಬಳಿಕ ಮತ್ತೊಮ್ಮೆ ಚಾಂಪಿಯನ್‌ ಎನಿಸಿಕೊಳ್ಳುವ ಉತ್ತರ ಪ್ರದೇಶದ ಕನಸು ಭಗ್ನಗೊಂಡಿತು.ಟೂರ್ನಿಯುದ್ದಕ್ಕೂ ಅಬ್ಬರದ ಪ್ರದರ್ಶನ ನೀಡಿದ್ದ ಕರ್ನಾಟಕ ಫೈನಲ್‌ನಲ್ಲಿ ಯುಪಿ ಮೇಲೆ ಬ್ಯಾಟಿಂಗ್‌ನಲ್ಲಿ ಪರಾಕ್ರಮ ಮೆರೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್‌ಗಳ ಮುನ್ನಡೆ ಪಡೆದಾಗಲೇ ರಾಜ್ಯದ ಗೆಲುವು ಬಹುತೇಕ ಖಚಿತವಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ 3ನೇ ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 444 ರನ್ ಕಲೆಹಾಕಿ, ಬರೋಬ್ಬರಿ 663 ರನ್ ಮುನ್ನಡೆ ಸಾಧಿಸಿದ್ದ ಕರ್ನಾಟಕ ಕೊನೆ ದಿನವೂ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ಮನಸು ಮಾಡಲಿಲ್ಲ. ಅನೀಶ್‌ ಕೆ.ವಿ. 273 ಎಸೆತಗಳಲ್ಲಿ 214 ರನ್‌ ಸಿಡಿಸಿದರೆ, ಕೃತಿಕ್‌ ಕೃಷ್ಣ 86 ರನ್‌ ಕೊಡುಗೆ ನೀಡಿದರು. ಈ ಇಬ್ಬರ ನಿರ್ಗಮನದ ಬಳಿಕ ತಂಡ ಬೇಗನೇ ಆಲೌಟಾಯಿತು.805 ರನ್‌ಗಳ ಅಸಾಧ್ಯ ಬೃಹತ್‌ ಗುರಿ ಬೆನ್ನತ್ತಿದ ಯುಪಿ 62 ರನ್‌ ಗಳಿಸುವಷ್ಟರಲ್ಲೇ 4 ವಿಕೆಟ್‌ ಕಳೆದುಕೊಂಡಿತು. ಆದರೆ ಸ್ವಸ್ತಿಕ್‌(67), ವಿಪ್ರಾಜ್‌ ನಿಗಮ್‌(73) ತಂಡವನ್ನು ಆಲೌಟಾಗುವುದರಿಂದ ತಪ್ಪಿಸಿದರು. ಯುವ ವೇಗಿ ಮನ್ವಂತ್‌ ಕುಮಾರ್‌ 5 ವಿಕೆಟ್‌ ಕಬಳಿಸಿದರು.ಸ್ಕೋರ್: ಕರ್ನಾಟಕ 358/10 ಮತ್ತು 585/10 (ಅನೀಶ್‌ 214, ಕೃಷ್ಣ 86, ಕುನಾಲ್‌ 4-90), ಉತ್ತರ ಪ್ರದೇಶ 139/10 ಮತ್ತು 174/6 (ವಿಪ್ರಾಜ್‌ 73, ಸ್ವಸ್ತಿಕ್ 67, ಮನ್ವಂತ್‌ 5-36)2 ತಿಂಗಳಲ್ಲಿ ರಾಜ್ಯ ತಂಡಕ್ಕೆ 2ನೇ ಪ್ರಶಸ್ತಿ

ಕರ್ನಾಟಕ 2 ತಿಂಗಳಲ್ಲಿ 2 ರಾಷ್ಟ್ರೀಯ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿವೆ. ಇತ್ತೀಚೆಗಷ್ಟೇ ಕೂಚ್‌ ಬೆಹಾರ್‌ ಅಂಡರ್‌-19 ಟೂರ್ನಿಯಲ್ಲಿ ಕರ್ನಾಟಕ ಪ್ರಶಸ್ತಿ ಗೆದ್ದಿತ್ತು. ಇವೆರಡೂ ರಾಜ್ಯ ತಂಡಗಳಿಗೆ ಚೊಚ್ಚಲ ಪ್ರಶಸ್ತಿ ಎನ್ನುವುದು ವಿಶೇಷ.