ಅಥ್ಲೆಟಿಕ್ಸ್‌: ರಾಜ್ಯದ ಆರ್ಯಾಗೆ ಬೆಳ್ಳಿ ಪದಕ

| Published : May 15 2024, 01:35 AM IST / Updated: May 16 2024, 04:48 AM IST

ಸಾರಾಂಶ

ರಾಷ್ಟ್ರೀಯ ಫೆಡರೇಶನ್‌ ಗೇಮ್ಸ್‌ ಅಥ್ಲೆಟಿಕ್ಸ್‌ನಲ್ಲಿ ಮುಂದುವರಿದ ಕರ್ನಾಟಕದ ಪದಕ ಬೇಟೆ. ಲಾಂಗ್‌ ಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಆರ್ಯಾ ಎಸ್‌. ಈ ವರೆಗೂ ರಾಜ್ಯಕ್ಕೆ 2 ಚಿನ್ನ, 2 ಬೆಳ್ಳಿ.

ಭುವನೇಶ್ವರ: ಇಲ್ಲಿ ನಡೆಯುತ್ತಿರುವ 27ನೇ ರಾಷ್ಟ್ರೀಯ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಪುರುಷರ ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಆರ್ಯಾ ಎಸ್‌. ಬೆಳ್ಳಿ ಪದಕ ಗೆದ್ದಿದ್ದಾರೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಆರ್ಯಾ 7.83 ಮೀ. ದೂರಕ್ಕೆ ನೆಗೆದು 2ನೇ ಸ್ಥಾನ ಪಡೆದರು. ತಮಿಳುನಾಡಿನ ಜೆಸ್ವಿನ್‌ ಆ್ಯಲ್ಡ್ರಿನ್‌ 7.99 ಮೀ. ದೂರಕ್ಕೆ ನೆಗೆದು ಚಿನ್ನ ಗಳಿಸಿದರೆ, 7.81 ಮೀ. ದೂರಕ್ಕೆ ನೆಗೆದ ಕೇರಳದ ಮುಹಮ್ಮದ್ ಅನೀಸ್‌ ಕಂಚಿಗೆ ತೃಪ್ತಿಪಟ್ಟರು.

ಚಾಂಪಿಯನ್‌ಶಿಪ್‌ನಲ್ಲಿ ಈ ವರೆಗೂ ಕರ್ನಾಟಕ ಒಟ್ಟು 4 ಪದಕಗಳನ್ನು ಗೆದ್ದಿದೆ. ಮೊದಲ ದಿನ ಮಹಿಳೆಯರ ಜಾವೆಲಿನ್‌ ಥ್ರೋನಲ್ಲಿ ಕರಿಶ್ಮಾ ಸನಿಲ್‌ ಬೆಳ್ಳಿ ಪದಕ ಜಯಿಸಿದ್ದರು. 2ನೇ ದಿನ ಮಹಿಳೆಯರ 200 ಮೀ. ಓಟದಲ್ಲಿ ಉನ್ನತಿ ಅಯ್ಯಪ್ಪ, ಪುರುಷರ ಹೈಜಂಪ್‌ನಲ್ಲಿ ಚೇತನ್‌ ಸುಬ್ರಹ್ಮಣ್ಯ ಚಿನ್ನದ ಪದಕ ಬಾಚಿಕೊಂಡಿದ್ದರು.

ಬುಧವಾರ ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆ ನಡೆಯಲಿದ್ದು ತಾರಾ ಅಥ್ಲೀಟ್‌ಗಳಾದ ನೀರಜ್‌ ಚೋಪ್ರಾ, ಕಿಶೋರ್‌ ಜೆನಾ, ಡಿ.ಪಿ.ಮನು ಸ್ಪರ್ಧಿಸಲಿದ್ದಾರೆ.