ಸಾರಾಂಶ
ನಾಗ್ಪುರ: ದಶಕದ ಬಳಿಕ ರಣಜಿ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಭಾರಿ ಹಿನ್ನಡೆಯುಂಟಾಗಿದ್ದು, ಈ ಬಾರಿ ಸೆಮಿಫೈನಲ್ ಪ್ರವೇಶಿಸುವ ಕನಸು ಭಗ್ನಗೊಳ್ಳುವ ಸಾಧ್ಯತೆ ಹೆಚ್ಚಿದೆ.
ವಿದರ್ಭದ 460 ರನ್‌ಗೆ ಉತ್ತರವಾಗಿ ರಾಜ್ಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 286 ರನ್‌ಗೆ ಆಲೌಟಾಗಿದ್ದು, 174 ರನ್ ಹಿನ್ನಡೆ ಅನುಭವಿಸಿತು. ಬಳಿಕ 2ನೇ ಇನ್ನಿಂಗ್ಸ್ ಆರಂಬಿಸಿರುವ ವಿದರ್ಭ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದು, ಒಟ್ಟಾರೆ 224 ರನ್ ಮುನ್ನಡೆಯಲ್ಲಿದೆ.
ಕರ್ನಾಟಕಕ್ಕೆ ಬೃಹತ್ ಗುರಿ ನೀಡಿ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿ ವಿದರ್ಭ ತಂಡವಿದೆ.2 ದಿನದಂತ್ಯಕ್ಕೆ 2 ವಿಕೆಟ್‌ಗೆ 98 ಗಳಿಸಿದ್ದ ರಾಜ್ಯ ತಂಡ ಭಾನುವಾರ ವಿದರ್ಭ ಬೌಲರ್‌ಗಳ ದಾಳಿಗೆ ನಲುಗಿತು/ ಕ್ರೀಸ್ ಕಾಯ್ದುಕೊಂಡಿದ್ದ ಸಮರ್ಥ್ 59 ರನ್ ಗಳಿಸಿ ಓಟಾದರೆ, ಉಪನಾಯಕ ನಿಕಿನ್ ಜೋಸ್ 82 ರನ್ ಗಳಿಸಿ ನಿರ್ಗಮಿಸಿದರು.
ಶರತ್ 29, ಮನೀಶ್ ಪಾಂಡೆ 15, ಹಾರ್ದಿಕ್ ರಾಜ್ 23, ವಿದ್ವತ್ 23 ರನ್ ಗಳಿಸಲಷ್ಟೆ ಸಮರ್ಥರಾದರು. ಅಂಡರ್ 19 ವಿಶ್ವಕಪ್ ಸ್ಟಾರ್ ಧೀರಜ್ ಕೇವಲ 5 ರನ್ ಗಳಿಸಿ ಔಟಾದರೆ, ಕೌಶಿಕ್ ಸೊನ್ನೆ ಸುತ್ತಿದರು.
ಮೊದಲ ಇನ್ನಿಂಗ್ಸ್ ಹಿನ್ನಡೆಯಲ್ಲಿರುವ ರಾಜ್ಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಪಂದ್ಯ ಡ್ರಾ ಕಂಡಲ್ಲಿ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ವಿದರ್ಭ ಸೆಮೀಸ್ ಪ್ರವೇಶ ಮಾಡಲಿದೆ.
ಸ್ಕೋರ್: ವಿದರ್ಭ 460/10 ಮತ್ತು 40/0 (3ನೇ ದಿನದಂತ್ಯಕ್ಕೆ)(ಅಥರ್ವ ತೈಡೆ 21*, ಧೃವ್ 29*), ಕರ್ನಾಟಕ 286/10( ನಿಕಿನ್ 82, ಸಮರ್ಥ್ 59, ಅನೀಶ್ 34, ಯಶ್ ಠಾಕೂರ್ 3-48)
ತಮಿಳ್ನಾಡು ಸೆಮೀಸ್‌ಗೆ: ಕ್ವಾರ್ಟರ್‌ನಲ್ಲಿ ಹಾಲಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಇನ್ನಿಂಗ್ಸ್ ಮತ್ತು 36 ರನ್ ಜಯ ಗಳಿಸಿದ ತಮಿಳುನಾಡು ಸೆಮಿಫೈನಲ್ ತಲುಪಿದೆ. ಸೌರಾಷ್ಟ್ರದ 183 ರನ್‌ಗೆ ಉತ್ತರವಾಗಿ ತಮಿಳುನಾಡು 338 ಗಳಿಸಿ 255 ರನ್ ಮುನ್ನಡೆ ಪಡೆದಿತ್ತು.
2ನೇ ಇನ್ನಿಂಗ್ಸ್‌ನಲ್ಲಿ ಸೌರಾಷ್ಟ್ರ 122 ರನ್‌ಗೆ ಆಲೌಟಾಯಿತು. ಮತ್ತೊಂದು ಕ್ವಾರ್ಟರ್‌ನಲ್ಲಿ ಬರೋಡಾ ವಿರುದ್ಧ ಮುಂಬೈ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಮುಂಬೈನ 384 ರನ್‌ಗೆ ಉತ್ತರವಾಗಿ ಬರೋಡಾ 348ಕ್ಕೆ ಆಲೌಟಾಯಿತು.
2ನೇ ಇನ್ನಿಂಗ್ಸ್‌ನಲ್ಲಿ ಮುಂಬೈ 3ನೇ ದಿನದಂತ್ಯಕ್ಕೆ1 ವಿಕೆಟ್‌ಗೆ 21 ರನ್ ಗಳಿಸಿದ್ದು, 57 ರನ್ ಮುನ್ನಡೆಯಲ್ಲಿದೆ. ಇನ್ನೊಂದು ಕ್ವಾರ್ಟರ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಆಂಧ್ರಕ್ಕೆ ಗೆಲುವಿಗೆ 169 ರನ್ ಗುರಿ ಲಭಿಸಿದ್ದು, 4 ವಿಕೆಟ್‌ಗೆ 94 ರನ್ ಗಳಿಸಿದೆ.