ಸಾರಾಂಶ
ಬೆಂಗಳೂರು: ಕರ್ನಾಟಕ ಚೊಚ್ಚಲ ರಣಜಿ ಟ್ರೋಫಿ ಗೆದ್ದು 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಟೆನಿಸ್ ಸಂಸ್ಥೆ(ಕೆಎಸ್‌ಎಲ್‌ಟಿಎ) ಯಿಂದ 1973-74ರ ಟ್ರೋಫಿ ವಿಜೇತ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ಕೆಎಸ್‌ಎಲ್‌ಟಿಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಣಜಿ ವಿಜೇತ ತಂಡದ ಸದಸ್ಯರಾಗಿದ್ದ ಬ್ರಿಜೇಶ್ ಪಟೇಲ್, ಜಿ.ಆರ್.ವಿಶ್ವನಾಥ್, ಸಯ್ಯದ್ ಕೀರ್ಮಾನಿ, ಸುಧಾಕರ್ ರಾವ್, ಸಂಜಯ್ ದೇಸಾಯಿ, ರಘುನಾಥ್ ಸೇರಿದಂತೆ 9 ಆಟಗಾರರಿಗೆ ಸನ್ಮಾನ ಮಾಡಲಾಯಿತು. ಜೊತೆಗೆ ಅಗಲಿದ ಕ್ರಿಕೆಟಿಗರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ‘1974ರ ರಣಜಿ ಟ್ರೋಫಿ ಗೆಲುವು ರಾಜ್ಯದ ಕ್ರಿಕೆಟ್‌ನ ಬಾಗಿಲನ್ನು ತೆರೆಯುವಂತೆ ಮಾಡಿತು.
ಬಲಿಷ್ಠ ಮುಂಬೈ ತಂಡವನ್ನು ಸೋಲಿಸಲು ಸಾಧ್ಯವಿದೆ ಎಂಬುದನ್ನು ಇತರ ರಾಜ್ಯಗಳಿಗೆ ತೋರಿಸಿಕೊಟ್ಟಿದ್ದೇ ಕರ್ನಾಟಕ. ಅಂದಿನ ಗೆಲುವು ರಾಜ್ಯದ ಕ್ರಿಕೆಟ್‌ನ ದಿಕ್ಕನ್ನು ಬದಲಿಸಿತು’ ಎಂದರು.ಅನಿಲ್ ಕುಂಬ್ಳೆ, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ, ವಿನಯ್‌ಕುಮಾರ್ ವಿಡಿಯೋ ಸಂದೇಶ ರವಾನಿಸಿದರು. ಸಮಾರಂಭದಲ್ಲಿ ಎನ್‌ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್, ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ರಾಜ್ಯ ಕ್ರಿಕೆಟ್ ಹಾಗೂ ಟೆನಿಸ್ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡರು.