ರಾಷ್ಟ್ರೀಯ ಗೇಮ್ಸ್‌ : ಸೈಕ್ಲಿಂಗ್‌ನಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿಗೆ ಹ್ಯಾಟ್ರಿಕ್‌ ಚಿನ್ನ!

| N/A | Published : Feb 06 2025, 11:48 PM IST / Updated: Feb 07 2025, 04:57 AM IST

ಸಾರಾಂಶ

ಇತ್ತೀಚೆಗಷ್ಟೇ ಮಹಿಳೆಯರ ಸ್ಕ್ರ್ಯಾಚ್ ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಕೀರ್ತಿ. ಗುರುವಾರ ಮತ್ತೆರಡು ಚಿನ್ನದ ಪದಕ. ಟೆನಿಸ್‌ನಲ್ಲಿ ಕರ್ನಾಟಕ ತಂಡ ಫೈನಲ್‌ಗೆ

ಡೆಹ್ರಾಡೂನ್‌: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಮತ್ತೆರಡು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಸೈಕ್ಲಿಂಗ್‌ನಲ್ಲಿ ರಾಜ್ಯದ ಕೀರ್ತಿ ರಂಗಸ್ವಾಮಿ ಗುರುವಾರ ಡಬಲ್ ಚಿನ್ನದ ಸಾಧನೆ ಮಾಡಿದರು. ಈ ಮೂಲಕ ಕ್ರೀಡಾಕೂಟದಲ್ಲಿ ಚಿನ್ನದ ಗಳಿಕೆಯನ್ನು 3ಕ್ಕೆ ಹೆಚ್ಚಿಸಿದರು. 

ಗುರುವಾರ ಮಹಿಳೆಯರ ಕೀರಿನ್‌ ಹಾಗೂ ಓಮ್ನಿಯಮ್‌ ವಿಭಾಗಗಳಲ್ಲಿ ಕೀರ್ತಿ ಚಿನ್ನದ ಪದಕ ಗೆದ್ದರು. ಇತ್ತೀಚೆಗಷ್ಟೇ ಅವರು ಮಹಿಳೆಯರ ಸ್ಕ್ರ್ಯಾಚ್ ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದರು. ರಾಜ್ಯ ಸೈಕ್ಲಿಂಗ್‌ನಲ್ಲಿ 4 ಚಿನ್ನ, 1 ಕಂಚು ಸೇರಿ ಒಟ್ಟು 5 ಪದಕ ಗೆದ್ದಿದೆ. ಒಟ್ಟಾರೆ ರಾಜ್ಯದ ಪದಕ ಗಳಿಕೆ 56ಕ್ಕೆ ಏರಿಕೆಯಾಗಿದೆ. ಕರ್ನಾಟಕ 30 ಚಿನ್ನ, 11 ಬೆಳ್ಳಿ ಹಾಗೂ 15 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಸರ್ವಿಸಸ್‌ 28 ಚಿನ್ನ ಸೇರಿ 52 ಪದಕದೊಂದಿಗೆ 2ನೇ, ಮಹಾರಾಷ್ಟ್ರ 19 ಚಿನ್ನ ಸೇರಿ 88 ಪದಕದೊಂದಿಗೆ 3ನೇ ಸ್ಥಾನದಲ್ಲಿದೆ. 

ಪುರುಷರ ಟೆನಿಸ್‌ನಲ್ಲಿ ಕರ್ನಾಟಕ ಫೈನಲ್‌ಗೆ: ಪುರುಷರ ತಂಡ ವಿಭಾಗದ ಟೆನಿಸ್‌ನಲ್ಲಿ ಕರ್ನಾಟಕ ಫೈನಲ್‌ ಪ್ರವೇಶಿಸಿದೆ. ಗುರುವಾರ ಸರ್ವಿಸ್‌ ವಿರುದ್ಧ ಸೆಮಿಫೈನಲ್‌ನಲ್ಲಿ ರಾಜ್ಯಕ್ಕೆ 2-1 ಗೆಲುವು ಲಭಿಸಿತು. ಮೊದಲ ಸಿಂಗಲ್ಸ್‌ನಲ್ಲಿ ನಿಕಿ ಪೂನಚ್ಚ ಸೋತರೂ, 2ನೇ ಸಿಂಗಲ್ಸ್‌ನಲ್ಲಿ ಪ್ರಜ್ವಲ್‌ ದೇವ್‌, ಡಬಲ್ಸ್‌ನಲ್ಲಿ ನಿಕಿ-ಪ್ರಜ್ವಲ್ ಗೆದ್ದರು. ಫೈನಲ್‌ನಲ್ಲಿ ರಾಜ್ಯಕ್ಕೆ ತಮಿಳುನಾಡು ಸವಾಲು ಎದುರಾಗಲಿದೆ.