ದುಬೈನಲ್ಲಿ ಕೂಟ ನಡೆಯುತ್ತಿದೆ. ರಣ್‌ವೀರ್‌ ಸಿಂಗ್‌ ಹಾಗೂ ಏಕ್ತಾ ದೇ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅಂಡರ್-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪಾವನ ನಾಗರಾಜ್‌ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ ನಡೆದ ಮಹಿಳಾ ವಿಭಾಗದ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ 6.32 ಮೀ. ದೂರಕ್ಕೆ ಜಿಗಿದ ಪವನಾ ಅವರು ಅಗ್ರಸ್ಥಾನಿಯಾಗಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇದೇ ವೇಳೆ ರಣ್‌ವೀರ್‌ ಸಿಂಗ್‌ ಹಾಗೂ ಏಕ್ತಾ ದೇ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಏಕ್ತಾ ಅವರು 10 ನಿಮಿಷ 31.95 ಸೆಕೆಂಡ್‌ಗಳಲ್ಲಿ ಕ್ರಮಿಸಿದರೆ, ರಣ್‌ವೀರ್‌ ಅವರು 9 ನಿಮಿಷ 22.67 ಸೆಕಂಡ್‌ಗಳಲ್ಲಿ ಗುರಿ ತಲುಪಿದರು. ಇನ್ನು, ಅನುರಾಗ್‌ ಸಿಂಗ್‌ ಪುರುಷರ ಶಾಟ್‌ಪುಟ್‌ನಲ್ಲಿ ಚಿನ್ನ ಗೆದ್ದರು. ಮಹಿಳೆಯರ 10000 ರೇಸ್‌ನಲ್ಲಿ ಆರತಿ ಕೂಡಾ ಬಂಗಾರದ ಸಾಧನೆ ಮಾಡಿದರು.

ಆರ್ಚರಿ ವಿಶ್ವಕಪ್‌: ಭಾರತ ಪುರುಷರ ತಂಡ ಫೈನಲ್‌ಗೆ

ಶಾಂಘೈ: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ರಲ್ಲಿ ಭಾರತದ ರೀಕರ್ವ್‌ ಪುರುಷರ ತಂಡ ಫೈನಲ್‌ ಪ್ರವೇಶಿಸಿದೆ. ತರುಣ್‌ದೀಪ್‌ ರೈ, ಧೀರಜ್‌ ಬೊಮ್ಮದೇವರ ಹಾಗೂ ಪ್ರವೀಣ್‌ ಜಾಧವ್‌ ಅವರಿದ್ದ ತಂಡ ಫೈನಲ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಕೊರಿಯಾ ವಿರುದ್ಧ ಸೆಣಸಾಡಲಿದೆ. ಸದ್ಯ ಭಾರತ ಕೂಟದಲ್ಲಿ 3 ಪದಕ ಖಚಿತಪಡಿಸಿಕೊಂಡಿದೆ. ಇದೇ ವೇಳೆ ಕಾಂಪೌಂಡ್‌ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಿಯಾನ್ಶ್‌, ಜ್ಯೋತಿ ಸುರೇಖಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.