ಆರ್‌ಸಿಬಿ ಟ್ರೋಫಿ ಗೆಲುವಿನ ಹಿಂದೆ ಕನ್ನಡತಿ ಶ್ರೇಯಾಂಕ ಚಮತ್ಕಾರ

| Published : Mar 18 2024, 01:47 AM IST

ಸಾರಾಂಶ

ಫೈನಲ್‌ನಲ್ಲಿ 4 ವಿಕೆಟ್‌ ಕಬಳಿಸಿದ 21ರ ಶ್ರೇಯಾಂಕ ಟೂರ್ನಿಯ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಅಲ್ಲದೆ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು.

ನವದೆಹಲಿ: 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಫೈನಲ್‌ನಲ್ಲಿ ಸೋಲಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಚಾಂಪಿಯನ್‌ ಆಗಿ ಹೊರಹೊಮ್ಮಿತು. ‘ಈ ಸಲ ಕಪ್‌ ನಮ್ದೇ’ ಎನ್ನುತ್ತಿದ್ದ ಆರ್‌ಸಿಬಿಯ ಕೋಟ್ಯಂತರ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದೆ. ಈ ಗೆಲುವಿನ ಹಿಂದೆ ಕರ್ನಾಟಕದ ಯುವ ಸ್ಟಾರ್‌ ಶ್ರೇಯಾಂಕ ಪಾಟೀಲ್‌ ಅವರ ಚಮತ್ಕಾರ ಮರೆಯಲಾಗದರು.ಕಳೆದ ವರ್ಷವೇ ಆರ್‌ಸಿಬಿ ಪರ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ 21ರ ಶ್ರೇಯಾಂಕ ಪಾಟೀಲ್‌ ಈ ಬಾರಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ ಇಂಡಿಯನ್ಸ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ನಿರ್ಣಾಯಕ ಘಟ್ಟದಲ್ಲಿ ಹರ್ಮನ್‌ಪ್ರೀತ್‌ ಸೇರಿ ಒಟ್ಟು 2 ವಿಕೆಟ್‌ ಕಿತ್ತು ಗೆಲುವಿನ ರೂವಾರಿ ಎನಿಸಿಕೊಂಡಿದ್ದ ಶ್ರೇಯಾಂಕ ಫೈನಲ್‌ನಲ್ಲೂ ತಮ್ಮ ಕೈ ಚಳಕ ತೋರಿಸಿದರು. ಒಟ್ಟು 3.3 ಓವರಲ್ಲಿ ಕೇವಲ 12 ರನ್‌ ನೀಡಿ 4 ವಿಕೆಟ್‌ ಕಬಳಿಸಿದ 21ರ ಶ್ರೇಯಾಂಕ ಟೂರ್ನಿಯ ಗರಿಷ್ಠ ವಿಕೆಟ್‌ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಅಲ್ಲದೆ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೂ ಭಾಜನರಾದರು. ಫೈನಲ್‌ ಪಂದ್ಯದಲ್ಲಿ ಅವರು ಮೆಗ್‌ ಲ್ಯಾನಿಂಗ್‌, ಮಿನ್ನು ಮಾನಿ, ಅರುಂಧತಿ ರೆಡ್ಡಿ ಹಾಗೂ ತಾನಿಯಾ ಭಾಟಿಯಾ ವಿಕೆಟ್‌ ಕಿತ್ತರು.