ಕಾರವಾರದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಸರ್ಕಾರದಿಂದ 11 ಎಕರೆ ಜಾಗ ಹಸ್ತಾಂತರ

| Published : Mar 01 2024, 02:16 AM IST

ಕಾರವಾರದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಲು ಸರ್ಕಾರದಿಂದ 11 ಎಕರೆ ಜಾಗ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರದಲ್ಲಿ ನೂತನ ಕ್ರಿಕೆಟ್‌ ಕ್ರೀಡಾಂಗಣ ತಲೆ ಎತ್ತಲಿದ್ದು, ಇದಕ್ಕಾಗಿ ಸರ್ಕಾರ 11.34 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಗೆ ಮಂಜೂರು ಮಾಡಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಕಾರವಾರದಲ್ಲಿ ನೂತನ ಕ್ರಿಕೆಟ್‌ ಕ್ರೀಡಾಂಗಣ ತಲೆ ಎತ್ತಲಿದ್ದು, ಇದಕ್ಕಾಗಿ ಸರ್ಕಾರ 11.34 ಎಕರೆ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)ಗೆ ಮಂಜೂರು ಮಾಡಿದೆ. ಜಾಗ ಹಸ್ತಾಂತರ ಒಪ್ಪಂದ ಕಾರ್ಯಕ್ರಮ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಕೆಎಸ್‌ಸಿಎ ಹಾಗೂ ಜಿಲ್ಲಾಡಳಿತ ಒಪ್ಪಂದಕ್ಕೆ ಸಹಿ ಹಾಕಿದವು.ಸದಾಶಿವಗಡದಲ್ಲಿರುವ 11.34 ಎಕರೆ ಗೋಮಾಳ ಜಾಗವನ್ನು ಕೆಎಸ್‌ಸಿಎಗೆ ಬಿಟ್ಟುಕೊಡಲಾಗಿದೆ ಎಂದು ಶಾಸಕ ಸತೀಶ್‌ ಸೈಲ್‌ ತಿಳಿಸಿದರು. ಅಂಕೋಲಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಸಿದ್ಧತೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಕ್ರೀಡಾಂಗಣ ಸಿದ್ಧಗೊಂಡರೆ ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತದೆ. ಜತೆಗೆ ಪ್ರವಾಸೋದ್ಯಮ ಕೂಡಾ ಬೆಳೆಯುತ್ತದೆ. ಕ್ರಿಕೆಟ್ ಅಸೋಸಿಯೇಷನ್‌ಗೆ ಸದಾಶಿವಗಡ ದಲ್ಲಿ ಇರುವ ಗೋಮಾಳ ಜಾಗ ೧೧.೩೪ ಎಕರೆ ನೀಡಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಜಾಗ ಪಡೆಯುವುದಿಲ್ಲ. ಆತಂಕಪಡುವ ಅವಶ್ಯಕತೆಯಿಲ್ಲ. ಅದು ಗೋಮಾಳ ಜಾಗವಾಗಿದ್ದರಿಂದ ಗೋ ಸರ್ವೇ ನಡೆಸಿಯೇ ಜಾಗವನ್ನು ಡಿನೋಟಿಫಿಕೇಶನ್ ಮಾಡಲಾಗಿದೆ ಎಂದು ಸತೀಶ್‌ ಸೈಲ್‌ ಹೇಳಿದರು.ಕೆಎಸ್‌ಸಿಎ ಅಧ್ಯಕ್ಷ ರಘುರಾಮ್‌ ಭಟ್‌ ಮಾತನಾಡಿ, ಶೀಘ್ರದಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಭಾಗದ ಕ್ರಿಕೆಟ್‌ ಆಟಗಾರರಿಗೆ ಕ್ರೀಡಾಂಗಣದಿಂದ ಅನುಕೂಲವಾಗಲಿದೆ. ಈ ಜಿಲ್ಲೆಯಲ್ಲಿ ಕ್ರೀಡಾಂಗಣ ಇಲ್ಲದೇ ತೊಂದರೆ ಆಗುತ್ತಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಈ ಅಂತಾರಾಷ್ಟ್ರೀಯ ಕ್ರೀಡಾಂಗಣ ಕಾರವಾರದ ಯುವಕರಿಗೆ ಸಾಕಷ್ಟು ಸಹಕಾರಿ ಆಗಲಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಸಾಕಷ್ಟು ಪೂರ್ವಭಾವಿ ತಯಾರಿಗಳಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಯುವಕ-ಯುವತಿಯರಿಗಾಗಿ ಇಲ್ಲಿ ತರಬೇತಿ ಸಂಸ್ಥೆ ಕೂಡಾ ಸ್ಥಾಪಿಸಲಾಗುತ್ತಿದೆ. ಈ ಜಿಲ್ಲೆಯ ಯುವಜನಾಂಗ ಕ್ರೀಡೆಯಲ್ಲಿ ನಮ್ಮ ರಾಜ್ಯದ ಪ್ರತಿನಿಧಿಯಾಗಬೇಕು ಎನ್ನುವ ಆಸೆಯಿದೆ ಎಂದರು. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಅಂಕೋಲಾ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಭೂ ಪರಿಹಾರ ಹೆಚ್ಚು ನೀಡಲು ಸ್ಥಳೀಯರು ಅಗ್ರಹಿಸಿದ್ದರು. ಹೆಚ್ಚುವರಿ ಪರಿಹಾರ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಹಂತದಲ್ಲಿದೆ. ಈ ಹಿಂದೆ ನೌಕಾನೆಲೆ ನಿರ್ಮಾಣದ ವೇಳೆ ಸಂತ್ರಸ್ತರಾದ ಕೆಲವರು ಪುನಃ ಆಗುತ್ತಿದ್ದಾರೆ. ಅವರಿಗೆ ಹೆಚ್ಚಿನ ಭೂಮಿ ನೀಡಲು ಕೂಡಾ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಕ್ರಿಕೆಟ್ ಅಸೋಸಿಯೇಷನ್‌ನ ನಿಖಿಲ, ವಿನಯ ಮೊದಲಾದವರು ಇದ್ದರು.