ಖೇಲೋ ಇಂಡಿಯಾ: ಈಜು ಸ್ಪರ್ಧೆಯಲ್ಲಿ 7 ಪದಕ ಬಾಚಿದ ಬೆಂಗಳೂರಿನ ಜೈನ್‌ ವಿವಿ

| Published : Feb 21 2024, 02:05 AM IST

ಸಾರಾಂಶ

ಗುವಾಹಟಿಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿವಿ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ 7 ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಗುವಾಹಟಿ: ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ವಿವಿ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ 7 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈಜಿನಲ್ಲಿ ವಿವಿಗೆ 4 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕ ಒಲಿದಿದೆ. ಪುರುಷರ 200 ಮೀ. ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಶುಭ್ರಂತ್‌ ಪಾತ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 4x100 ಮೀ ಬ್ಯಾಕ್‌ಸ್ಟ್ರೋಕ್ಸ್‌ನಲ್ಲಿ ಶುಭ್ರಂತ್‌ ಅವರನ್ನೊಳಗೊಂಡ ತಂಡ ಕೂಡಾ ಬಂಗಾರದ ಸಾಧನೆ ಮಾಡಿತು. ಇದೇ ವೇಳೆ ಬಾಸ್ಕೆಟ್‌ಬಾಲ್‌ನಲ್ಲಿ ಜೈನ್‌ ವಿವಿ ಮಹಿಳಾ ತಂಡ ಫೈನಲ್‌ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಮದ್ರಾಸ್‌ ವಿವಿ ತಂಡದ ವಿರುದ್ಧ ಸೆಣಸಾಡಲಿದೆ.

ಳಾಂಗಣ ಅಥ್ಲೆಟಿಕ್ಸ್‌: ಗೆದ್ದ ಚಿನ್ನ ಕಳಕೊಂಡ ಗುಲ್ವೀರ್‌!

ಟೆಹ್ರಾನ್‌(ಇರಾನ್‌): ಏಷ್ಯನ್‌ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಗುಲ್ವೀರ್‌ ಸಿಂಗ್‌ಗೆ ಆಘಾತ ಎದುರಾಗಿದೆ. ಲೇನ್‌ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅವರನ್ನು ಅನರ್ಹಗೊಳಿಸಲಾಗಿದ್ದು, ಈ ಮೂಲಕ ಅವರು ತಮ್ಮ ಪದಕ ಕಳೆದುಕೊಂಡಿದ್ದಾರೆ. ಸೋಮವಾರ ನಡೆದಿದ್ದ 3000 ಮೀ. ಓಟದಲ್ಲಿ 8 ನಿಮಿಷ 07.48 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಅನರ್ಹತೆ ವಿರುದ್ಧ ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡಾ ತಿರಸ್ಕರಿಸಲಾಗಿದೆ. ಇದರೊಂದಿಗೆ ಭಾರತ 3 ಚಿನ್ನ, 1 ಬೆಳ್ಳಿಯೊಂದಿಗೆ ಟೂರ್ನಿಯಲ್ಲಿ ಅಭಿಯಾನ ಮುಗಿಸಿದೆ.