ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌ ಸೆಮಿಫೈನಲ್‌ಗೆ

| Published : Mar 24 2024, 01:31 AM IST

ಸಾರಾಂಶ

ಶ್ರೀಕಾಂತ್‌ 16 ತಿಂಗಳಲ್ಲೇ ಮೊದಲ ಬಾರಿ ಅಂತಿಮ 4ರ ಘಟ್ಟ ಪ್ರವೇಶ. 2022ರ ನವೆಂಬರ್‌ನಲ್ಲಿ ಹೈಲೋ ಓಪನ್‌ನಲ್ಲಿ ಶ್ರೀಕಾಂತ್‌ ಸೆಮೀಸ್‌ ಪ್ರವೇಶಿಸಿದ್ದರು. ಶ್ರೀಕಾಂತ್‌ ಸದ್ಯ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ.

ಬಾಸೆಲ್‌(ಸ್ವಿಜರ್‌ಲೆಂಡ್‌): ದೀರ್ಘ ಸಮಯದಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತದ ತಾರಾ ಶಟ್ಲರ್‌ ಕಿದಂಬಿ ಶ್ರೀಕಾಂತ್‌ ಸ್ವಿಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಪ್ರಿಯಾನ್ಶು ರಾಜಾವತ್‌, ಕಿರಣ್‌ ಜಾರ್ಜ್‌ ಅಭಿಯಾನ ಕೊನೆಗೊಳಿಸಿದ್ದಾರೆ.ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ವಿಶ್ವ ನಂ.1 ಶ್ರೀಕಾಂತ್‌, ಚೈನೀಸ್‌ ತೈಪೆಯ ಚಿಯಾ ಹೋ ಲೀ ವಿರುದ್ಧ 21-10, 21-14 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಕಳೆದ 16 ತಿಂಗಳಲ್ಲೇ ಮೊದಲ ಬಾರಿ ಬಿಡಬ್ಲ್ಯುಎಫ್‌ಐ ಟೂರ್ನಿಯ ಸೆಮೀಸ್‌ಗೇರಿದರು. 2022ರ ನವೆಂಬರ್‌ನಲ್ಲಿ ಹೈಲೋ ಓಪನ್‌ನಲ್ಲಿ ಶ್ರೀಕಾಂತ್‌ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರು. ಶ್ರೀಕಾಂತ್‌ ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಸೆಮೀಸ್‌ನಲ್ಲಿ ವಿಶ್ವ ನಂ.22, ಚೈನೀಸ್‌ ತೈಪೆಯ ಲಿನ್‌ ಚುನ್‌ ಯಿ ವಿರುದ್ಧ ಸೆಣಸಾಡಲಿದ್ದಾರೆ.

ಇದೇ ವೇಳೆ ಯುವ ಪ್ರತಿಭೆ ಕಿರಣ್‌ ಜಾರ್ಜ್‌ ಅವರು ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ವಿರುದ್ಧ 23-21, 17-21, 15-21 ಅಂತರದಲ್ಲಿ ಸೋಲನುಭವಿಸಿದರು. ಮೊದಲ ಸುತ್ತಲ್ಲಿ ಸೋತ ಹೊರತಾಗಿಯೂ ಬಳಿಕ ಪುಟಿದೆದ್ದ ಗೆಮ್ಕೆ, ಕೊನೆ ಎರಡು ಗೇಮ್‌ಗಳಲ್ಲಿ ಗೆದ್ದು ಪಂದ್ಯವನ್ನು ತಮ್ಮದಾಗಿಸಿಕೊಂಡರು. ಮತ್ತೊರ್ವ ಯುವ ತಾರೆ ಪ್ರಿಯಾನ್ಶು ರಾಜಾವತ್‌ ಅವರು ಚೈನೀಸ್‌ ತೈಪೆಯ ಚೊಯು ಟೀನ್‌ ಚೆನ್‌ ವಿರುದ್ಧ 15-21, 19-21 ಅಂತರದಲ್ಲಿ ಪರಾಭವಗೊಂಡರು.