ಸಾರಾಂಶ
ಕೋಲ್ಕತಾ: ಸತತ ವೈಫಲ್ಯಗಳ ಬಳಿಕ ಮಿಚೆಲ್ ಸ್ಟಾರ್ಕ್‌ರ ಮಾರಕ ದಾಳಿ ಹಾಗೂ ಫಿಲ್ ಸಾಲ್ಟ್‌ರ ಅಬ್ಬರದ ಆಟದಿಂದಾಗಿ 17ನೇ ಆವೃತ್ತಿ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ 4ನೇ ಗೆಲುವು ದಾಖಲಿಸಿದೆ. ಭಾನುವಾರದ ಮೊದಲ ಪಂದ್ಯದಲ್ಲಿ ಲಖನೌ ವಿರುದ್ಧ ಕೆಕೆಆರ್‌ಗೆ 8 ವಿಕೆಟ್ ಭರ್ಜರಿ ಗೆಲುವು ಲಭಿಸಿತು.
ಹ್ಯಾಟ್ರಿಕ್ ಗೆಲುವಿನೊಂದಿಗೆ ಅಬ್ಬರಿಸಿದ್ದ ಲಖನೌ ಸದ್ಯ ಸತತ 2 ಸೋಲಿನ ಮುಖಭಂಗಕ್ಕೊಳಗಾಗಿದೆ.ಮೊದಲು ಬ್ಯಾಟ್ ಮಾಡಿದ ಲಖನೌ 7 ವಿಕೆಟ್‌ಗೆ 171 ರನ್ ಗಳಿಸಿತು. ಆದರೆ ಈ ಮೊತ್ತ ಕೆಕೆಆರ್‌ನ ಸ್ಫೋಟಕ ಬ್ಯಾಟರ್‌ಗಳಿಗೆ ಸಾಕಾಗಲಿಲ್ಲ. 3.1 ಓವರ್ ಆಗುವಷ್ಟರಲ್ಲೇ 2 ಪ್ರಮುಖ ವಿಕೆಟ್ ಕಳೆದುಕೊಂಡರೂ, ಫಿಲ್ ಸಾಲ್ಟ್ ಅಬ್ಬರದಿಂದಾಗಿ ತಂಡ 15.4 ಓವರ್‌ಗಳಲ್ಲೇ ಗೆಲುವು ಸಾಧಿಸಿ ರನ್‌ರೇಟ್ ಅನ್ನು ಭರಪೂರ ಹೆಚ್ಚಿಸಿತು.
2ನೇ ಓವರ್‌ನಲ್ಲಿ ಸುನಿಲ್ ನರೈನ್(06), 4ನೇ ಓವರ್‌ನಲ್ಲಿ ಅಂಗ್‌ಕೃಷ್ ರಘುವಂಶಿ(07) ವಿಕೆಟ್ ಕಬಳಿಸಿದ ಮೊಹ್ಸಿನ್ ಖಾನ್ ಲಖನೌಗೆ ಗೆಲುವಿನ ನಿರೀಕ್ಷೆ ಹುಟ್ಟಿಸಿದ್ದರು. ಆದರೆ ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸಾಲ್ಟ್, ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿ ಕೆಕೆಆರ್‌ಗೆ ಭರ್ಜರಿ ಗೆಲುವು ತಂದುಕೊಟ್ಟರು. ಅವರು 47 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 89 ರನ್ ಚಚ್ಚಿದರೆ, ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 38 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವೆಸ್ಟ್‌ಇಂಡೀಸ್‌ನ ಯುವ ತಾರೆ ಶಾಮರ್ ಜೋಸೆಫ್ ಪಾದಾರ್ಪಣಾ ಪಂದ್ಯದಲ್ಲಿ 47 ರನ್ ಬಿಟ್ಟುಕೊಟ್ಟರು.
ಪೂರನ್ ನೆರವು: ಲಖನೌ ಸ್ಫೋಟಕ ಆರಂಭ ಪಡೆದರೂ ಸತತ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ಮುಳುವಾಯಿತು. ಪವರ್-ಪ್ಲೇ ವೇಳೆಗೆ 49 ರನ್ ಗಳಿಸಿದ್ದ ತಂಡ ಬಳಿಕ ಕುಸಿಯಿತು. ಡಿ ಕಾಕ್ 10, ದೀಪಕ್ ಹೂಡಾ 8, ಸ್ಟೋಯ್ನಿಸ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ನಾಯಕ ಕೆ.ಎಲ್.ರಾಹುಲ್ 39 ಹಾಗೂ ಆಯುಶ್ ಬದೋನಿ 29 ರನ್ ಗಳಿಸಿ ತಂಡಕ್ಕೆ ಅಲ್ಪ ಆಸರೆಯಾದರು. ಕೊನೆಯಲ್ಲಿ 32 ಎಸೆತಗಳಲ್ಲಿ 45 ರನ್ ಚಚ್ಚಿದ ಪೂರನ್, ತಂಡವನ್ನು 160ರ ಗಡಿ ದಾಟಿಸಿದರು. ಸ್ಟಾರ್ಕ್ 28 ರನ್ ನೀಡಿ 3 ವಿಕೆಟ್ ಕಿತ್ತರು.ಸ್ಕೋರ್: ಲಖನೌ 20 ಓವರಲ್ಲಿ 161/7 (ಪೂರನ್ 45, ರಾಹುಲ್ 39, ಸ್ಟಾರ್ಕ್ 3-28), ಕೆಕೆಆರ್ 15.4 ಓವರಲ್ಲಿ 162/2 (ಸಾಲ್ಟ್ 89*, ಶ್ರೇಯಸ್ 38, ಮೊಹ್ಸಿನ್ 2-29) ಪಂದ್ಯಶ್ರೇಷ್ಠ: ಫಿಲ್ ಸಾಲ್ಟ್