ಮಧ್ಯಮ ಕ್ರಮಾಂಕದ ಬ್ಯಾಟರ್‌ ಬೇಕಿತ್ತು, ಹೀಗಾಗಿ ರಾಹುಲ್‌ನ ಕೈಬಿಟ್ಟೆವು: ಅಗರ್ಕರ್‌

| Published : May 03 2024, 01:02 AM IST / Updated: May 03 2024, 04:07 AM IST

ಮಧ್ಯಮ ಕ್ರಮಾಂಕದ ಬ್ಯಾಟರ್‌ ಬೇಕಿತ್ತು, ಹೀಗಾಗಿ ರಾಹುಲ್‌ನ ಕೈಬಿಟ್ಟೆವು: ಅಗರ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ನ ತಂಡದ ಬಗ್ಗೆ ಗುರುವಾರ ಅಗರ್ಕರ್‌ ಹಾಗೂ ರೋಹಿತ್‌ ಶರ್ಮಾ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಿಂಕು, ಗಿಲ್‌ರನ್ನು ತಂಡದಿಂದ ಕೈಬಿಟ್ಟಿರುವ ಕಾರಣವನ್ನೂ ತಿಳಿಸಿದರು.

ಮುಂಬೈ: ಐಪಿಎಲ್‌ನಲ್ಲಿ ಕೆ.ಎಲ್‌.ರಾಹುಲ್‌ ಆರಂಭಿಕನಾಗಿ ಆಡುತ್ತಿದ್ದಾರೆ. ನಮಗೆ ಬೇಕಿದ್ದದ್ದು ಮಧ್ಯಮ ಕ್ರಮಾಂಕದ ಬ್ಯಾಟರ್‌. ಹೀಗಾಗಿ ರಾಹುಲ್‌ರನ್ನು ಬಿಟ್ಟು ರಿಷಭ್‌ ಪಂತ್‌ ಹಾಗೂ ಸಂಜು ಸ್ಯಾಮ್ಸನ್‌ರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದೇವೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್‌ ಅಗರ್ಕರ್‌ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ನ ತಂಡದ ಬಗ್ಗೆ ಗುರುವಾರ ಅಗರ್ಕರ್‌ ಹಾಗೂ ರೋಹಿತ್‌ ಶರ್ಮಾ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ರಿಂಕು ಸಿಂಗ್‌ರನ್ನು ಕೈಬಿಟ್ಟಿದ್ದು ಕಠಿಣ ನಿರ್ಧಾರ. 

ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಶುಭ್‌ಮನ್‌ ಗಿಲ್‌ ಕೂಡಾ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ತಂಡಕ್ಕೆ ನಾಲ್ವರು ಸ್ಪಿನ್ನರ್‌ಗಳು ಬೇಕೆಂದು ರೋಹಿತ್‌ ಹೇಳಿದಾಗ ಅವರಿಬ್ಬರನ್ನು ಕೈಬಿಡಲಾಯಿತು’ ಎಂದು ಅಗರ್ಕರ್‌ ತಿಳಿಸಿದ್ದಾರೆ. ಹಾರ್ದಿಕ್‌ ಪಾಂಡ್ಯ ಲಯದಲ್ಲಿದ್ದಾರೆ. ಹೀಗಾಗಿ ಉಪನಾಯಕತ್ವ ಸ್ಥಾನಕ್ಕೆ ಬೇರೆಯವರನ್ನು ಪರಿಗಣಿಸುವ ಅಗತ್ಯ ಬಂದಿಲ್ಲ ಎಂದು ಅಗರ್ಕರ್‌ ಸ್ಪಷ್ಟಪಡಿಸಿದರು. ಅಲ್ಲದೆ, ವಿರಾಟ್‌ ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅಗರ್ಕರ್‌ ತಿಳಿಸಿದರು.

4 ಸ್ಪಿನ್ನರ್ಸ್‌ ಬೇಕಿತ್ತು: ರೋಹಿತ್‌ ಶರ್ಮಾ

ವೆಸ್ಟ್‌ಇಂಡೀಸ್‌ನಲ್ಲಿ ನಾವು ತುಂಬಾ ಪಂದ್ಯಗಳನ್ನಾಡಿದ್ದೇವೆ. ಅಲ್ಲಿನ ಪಿಚ್‌ ಬಗ್ಗೆ ನಮಗೆ ತಿಳಿದಿದೆ. ಹೀಗಾಗಿ ನಾಲ್ವರು ಸ್ಪಿನ್ನರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ ಎಂದು ರೋಹಿತ್‌ ಶರ್ಮಾ ತಿಳಿಸಿದರು. 

ವಿಶ್ವಕಪ್‌ ತಂಡದ ಆಯ್ಕೆ ಬಗ್ಗೆ ಐಪಿಎಲ್‌ಗೂ ಮೊದಲೇ ಚರ್ಚೆ ನಡೆಸುತ್ತಿದ್ದೇವೆ. ಶೇ.70-80ರಷ್ಟು ತಂಡ ಮೊದಲೇ ನಿರ್ಧಾರವಾಗಿತ್ತು. ಹೀಗಾಗಿ ಐಪಿಎಲ್‌ ಪ್ರದರ್ಶನದ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿಲ್ಲ. ಶಿವಂ ದುಬೆ ಐಪಿಎಲ್‌ ಮತ್ತು ಭಾರತದ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಾರ್ದಿಕ್‌ ಜೊತೆ ದುಬೆ ಕೂಡಾ ಬೌಲಿಂಗ್ ಮಾಡುತ್ತಾರೆ ಎಂದು ರೋಹಿತ್‌ ಹೇಳಿದರು.