ಸಾರಾಂಶ
ಬೆಂಗಳೂರು : ಜ.23ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಕ್ರಿಕೆಟ್‌ನ ಪಂಜಾಬ್ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಿಸಲಾಗಿದೆ. ಈ ಹಿಂದಿನ ಪಂದ್ಯದಲ್ಲಿ ರಾಜ್ಯ ತಂಡದಲ್ಲಿದ್ದ ಮನೀಶ್ ಪಾಂಡೆ, ಕಿಶನ್ ಬೆದರೆಗೆ ಸ್ಥಾನ ಲಭಿಸಿಲ್ಲ.ಮಯಾಂಕ್ ಅಗರ್‌ವಾಲ್ ನಾಯಕತ್ವ ವಹಿಸಲಿದ್ದು, ಶ್ರೇಯಸ್ ಗೋಪಾಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ತಾರಾ ಬ್ಯಾಟರ್ ದೇವದತ್ ಪಡಿಕ್ಕಲ್, ವೇಗಿ ಪ್ರಸಿದ್ಧ್ ಕೃಷ್ಣ ಹಾಗೂ ಯುವ ಬ್ಯಾಟರ್ ಅನೀಶ್ ಕೆ.ವಿ. ತಂಡಕ್ಕೆ ಮರಳಿದ್ದಾರೆ. ಈ ಋತುವಿನ ರಣಜಿ ಕಳೆದ ಅಕ್ಟೋಬರ್‌ನಲ್ಲೇ ಆರಂಭಗೊಂಡಿದ್ದು, ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಟೂರ್ನಿಗಾಗಿ ರಣಜಿಗೆ ಬಿಡುವು ನೀಡಲಾಗಿತ್ತು. ‘ಸಿ’ ಗುಂಪಿನಲ್ಲಿರುವ ಕರ್ನಾಟಕ ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿದ್ದು, ಇನ್ನೆರಡು ಪಂದ್ಯಗಳನ್ನು ಗೆದ್ದರೂ ನಾಕೌಟ್ ಪ್ರವೇಶಿಸುವ ಸಾಧ್ಯತೆ ಕಡಿಮೆ.
ತಂಡ: ಮಯಾಂಕ್(ನಾಯಕ), ಶ್ರೇಯಸ್(ಉಪನಾಯಕ), ದೇವದತ್, ಅನೀಶ್, ಸ್ಮರಣ್, ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ಕೌಶಿಕ್, ಅಭಿಲಾಶ್ ಶೆಟ್ಟಿ, ಯಶೋವರ್ಧನ್, ನಿಕಿನ್ ಜೋಸ್, ವಿದ್ಯಾಧರ್ ಪಾಟೀಲ್, ಸುಜಯ್ ಸತೇರಿ, ಮೊಹ್ಸಿನ್ ಖಾನ್.
ವಿಜಯ್ ಹಜಾರೆ ಗೆದ್ದ ರಾಜ್ಯ ಆಟಗಾರರಿಗೆ ಭವ್ಯ ಸ್ವಾಗತ
ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆದ ಕರ್ನಾಟಕ ತಂಡದ ಆಟಗಾರರು ಭಾನುವಾರ ರಾತ್ರಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಆಟಗಾರರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು, ಅಭಿಮಾನಿಗಳು ತವರಿಗೆ ಬಂದ ಆಟಗಾರರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ, ಜೈಕಾರ ಕೂಗಿ ಸ್ವಾಗತಿಸಿದರು.