ಕೊಡವ ಹಾಕಿ ಉತ್ಸವ: ನೆಲ್ಲಮಕ್ಕಡ vs ಚೇಂದಂಡ ನಡುವೆ ಇಂದು ಫೈನಲ್ ಹಣಾಹಣಿ

| Published : Apr 28 2024, 01:25 AM IST / Updated: Apr 28 2024, 04:10 AM IST

ಕೊಡವ ಹಾಕಿ ಉತ್ಸವ: ನೆಲ್ಲಮಕ್ಕಡ vs ಚೇಂದಂಡ ನಡುವೆ ಇಂದು ಫೈನಲ್ ಹಣಾಹಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ. ಕುಲ್ಲೇಟಿರ ಹಾಗೂ ಕುಪ್ಪಂಡ(ಕೈಕೇರಿ)ಕ್ಕೆ ಸೆಮೀಸ್‌ನಲ್ಲಿ ಸೋಲು.

ದುಗ್ಗಳ ಸದಾನಂದ

 ನಾಪೋಕ್ಲು :  ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್ ನಲ್ಲಿ ಕುಲ್ಲೇಟಿರ ತಂಡದ ವಿರುದ್ಧ ಚೇಂದಂಡ ತಂಡ 3-1 ಗೋಲುಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರೆ ಕಳೆದ ಬಾರಿಯ ಚಾಂಪಿಯನ್ ಕುಪ್ಪಂಡ(ಕೈಕೇರಿ) ತಂಡದ ವಿರುದ್ಧ ನೆಲ್ಲಮಕ್ಕಡ ತಂಡ 4-2 ಗೋಲುಗಳ ಜಯಸಾಧಿಸಿ ಫೈನಲ್ ಪ್ರವೇಶಿಸಿತು.

ಭಾನುವಾರ ನೆಲ್ಲಮಕ್ಕಡ ಹಾಗೂ ಚೇಂದಂಡ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.

ಮೊದಲ ಸೆಮಿ ಫೈನಲ್ಸ್ ನಲ್ಲಿ ಚೇಂದಂಡ ಮತ್ತು ಕುಲ್ಲೆಟ್ಟರ ತಂಡಗಳ ನಡುವೆ ಪೈಪೋಟಿ ನಡೆಯಿತು. ಚೇಂದಂಡ ತಂಡದ ಚೇಂದಂಡ ಮೋಕ್ಷಿತ್ ಉತ್ತಪ್ಪ ನಾಲ್ಕನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ನಂತರ ಎರಡು ತಂಡಗಳ ನಡುವೆ ಹಣಾಹಣಿ ನಡೆಯಿತು. ಚೇಂದಂಡ ತಂಡದ ನಿಖಿನ್ ತಿಮ್ಮಯ್ಯ 34ನೇ ನಿಮಿಷದಲ್ಲಿ ಹಾಗೂ 48ನೇ ನಿಮಿಷದಲ್ಲಿ ಎರಡು ಗೋಲು ಗಳಿಸುವುದರ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ತೀವ್ರ ಪೈಪೋಟಿ ನೀಡಿದ ಕುಲ್ಲೇಟಿರ ತಂಡದ ಶುಭಂ 59ನೇ ನಿಮಿಷದಲ್ಲಿ ಒಂದು ಗೋಲು ಗಳಿಸಲಷ್ಟೇ ಶಕ್ತರಾದರು. ಆ ಮೂಲಕ 3-1 ಅಂತರದಲ್ಲಿ ಚೇಂದಂಡ ಕುಲ್ಲೇಟಿರ ವಿರುದ್ಧ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು. ಕಳೆದ ವರ್ಷ ಅಂತಿಮ ಹಂತಕ್ಕೆ ತಲುಪಿದ್ದ ಕುಲ್ಲೇಟಿರ ತಂಡ ಈ ವರ್ಷ ಸೆಮಿಫೈನಲ್ ನಲ್ಲಿ ನಿರ್ಗಮಿಸಿತು.

ಎರಡನೇ ಸೆಮಿಫೈನಲ್ ನಲ್ಲಿ ನೆಲ್ಲಮಕ್ಕಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಸೆಣೆಸಾಟ ನಡೆಸಿದವು. ನೆಲ್ಲಮಕ್ಕಡ ತಂಡದ ಪ್ರಧಾನ ಚಂಗಪ್ಪ 20ನೇ ನಿಮಿಷದಲ್ಲಿ ಹಾಗೂ ನೆಲಮಕ್ಕಡ ಪ್ರಧಾನ ಅಯ್ಯಪ್ಪ 21ನೇ ನಿಮಿಷದಲ್ಲಿ ಸತತವಾಗಿ ಎರಡು ಗೋಲು ಗಳಿಸಿದರು. ಪ್ರಬಲ ಪೈಪೋಟಿ ನೀಡಿದ ಕುಪ್ಪಂಡ (ಕೈಕೇರಿ )ತಂಡದ ಆಟಗಾರರಾದ ಕುಪ್ಪಂಡ ಸೋಮಯ್ಯ 24ನೇ ನಿಮಿಷದಲ್ಲಿ ಹಾಗೂ 32 ನೇ ನಿಮಿಷದಲ್ಲಿ ಎರಡು ಗೋಲುಗಳಿಸಿ ಸಮಬಲ ಸಾಧಿಸಿದರು. ನೆಲ್ಲಮಕ್ಕಡ ತಂಡದ ಸೋಮಯ್ಯ 34 ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದರು. ನೆಲ್ಲಮಕ್ಕಡ ಅಯ್ಯಪ್ಪ 59 ನೇ ನಿಮಿಷದಲ್ಲಿ ಒಟ್ಟು ನಾಲ್ಕು ಗೋಲುಗಳ ನೆರವಿನಿಂದ ನೆಲ್ಲಮಕ್ಕಡ ಕುಪ್ಪಂಡ (ಕೈಕೇರಿ) ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು.

ಇಂದು ಫೈನಲ್ ಹಣಾಹಣಿ

ಭಾನುವಾರ ಬೆಳಗ್ಗೆ 9 ಗಂಟೆಗೆ 3 ಮತ್ತು 4 ನೇ ಸ್ಥಾನಕ್ಕಾಗಿ ಕುಲ್ಲೇಟಿರ ಮತ್ತು ಕುಪ್ಪಂಡ(ಕೈಕೇರಿ) ತಂಡಗಳ ನಡುವೆ ಪೈಪೋಟಿ ನಡೆಯಲಿದೆ. 10.30 ಗಂಟೆಗೆ ನಡೆಯಲಿರುವ ಕುಂಡ್ಯೋಳಂಡ ಕಪ್ ಹಾಕಿ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಪಾಲ್ಗೊಳ್ಳಲಿದ್ದು, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಉಪಸ್ಥಿತರಿರುವರು.

ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪ ನಿರ್ದೇಶಕ ಮುಕ್ಕಾಟಿರ ಪುನಿತ್ ಕುಟ್ಟಯ್ಯ, ಉದ್ಯಮಿ ಕೊಡಂಗಡ ರವಿ ಕರುಂಬಯ್ಯ, ಐಆರ್‌ಎಸ್ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಡಾ.ಕೊಟ್ಟಂಗಡ ಪೆಮ್ಮಯ್ಯ, ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಪುಚ್ಚಿಮಾಡ ಎಂ.ಉತ್ತಪ್ಪ (ಸಂತೋಷ್), ಪಾಂಡಂಡ ಲೀಲಾ ಕುಟ್ಟಪ್ಪ, ಒಲಂಪಿಯನ್ ಡಾ.ಅಂಜಪರವಂಡ ಬಿ.ಸುಬ್ಬಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡಮಹೇಶ್ ನಾಚಯ್ಯ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಇಬ್ನಿ ಕೂರ್ಗ್ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಸಬಾಸ್ಟಿಯನ್, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕ ಪೀಟರ್, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷ ಕುಲ್ಲೇಟ್ಟಿರ ಹೇಮಾವತಿ ಅರುಣ್ ಬೇಬಾ, ಟಾಟಾ ಕಾಫಿ ವ್ಯವಸ್ಥಾಪಕ ನಿರ್ದೇಶಕ ಪಿ.ಎ.ಮಂದಣ್ಣ, ನಾಪೋಕ್ಲು ಕೆಪಿಎಸ್ ಸ್ಕೂಲ್ನ ಪ್ರಾಂಶುಪಾಲೆ ಮೇದುರ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲರಾದ ಎಂ.ಎಸ್.ಶಿವಣ್ಣ, ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಚಕ್ರವರ್ತಿ, ಅತಿಥಿಗಳಾಗಿ ಆರ್.ವಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪಿ.ಶ್ಯಾಮ್, ಆರ್.ವಿ.ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಡಿ.ಪಿ.ನಾಗರಾಜ್, ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥ ಮಹೇಶ್ ಶಣೈ, ಉದ್ಯಮಿ ಕಂಬೆಯಂಡ ಶ್ಯಾಮ್, ರಿಪಬ್ಲಿಕ್ ಕನ್ನಡ ಚಾನಲ್ ನ ಪ್ರಧಾನ ಸಂಪಾದಕ ಚೇರಂಡ ಕಿಶನ್ ಪಾಲ್ಗೊಳ್ಳಲಿದ್ದಾರೆ.