ಸಾರಾಂಶ
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಗೆ ಕೇವಲ 2 ದಿನ ಬಾಕಿಯಿದೆ. ಸರಣಿ ಆಡಲು ‘ಕಿಂಗ್’ ಖ್ಯಾತಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಕ್ಕೆ ಕಾಲಿಟ್ಟಾಗಲೇ ಅಲ್ಲಿನ ಮಾಧ್ಯಮಗಳು, ಆಟಗಾರರು, ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು, ಅಭಿಮಾನಿಗಳು ಕೊಹ್ಲಿಯ ಧ್ಯಾನ ಮಾಡುತ್ತಿದ್ದಾರೆ. ಆಸೀಸ್‌ನ ಎಲ್ಲರ ಬಾಯಲ್ಲೂ ಈಗ ಬರೀ ಕೊಹ್ಲಿ, ಕೊಹ್ಲಿ ಎಂದೇ ಕೇಳಿಬರುತ್ತಿವೆ. ಸದ್ಯ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದರೂ, ಅವರ ಖ್ಯಾತಿ ಒಂಚೂರೂ ಕಡಿಮೆಯಾಗಿಲ್ಲ.ಟೆಸ್ಟ್ ಸರಣಿ ನ.22ರಿಂದ ಪರ್ತ್‌ನಲ್ಲಿ ಆರಂಭಗೊಳ್ಳಲಿದ್ದು, ಕೊಹ್ಲಿ ತಂಡದ ಇತರೆಲ್ಲಾ ಆಟಗಾರರಿಗಿಂತ ಮೊದಲೇ ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಆಸೀಸ್ ತಲುಪಿದ ದಿನದಿಂದಲೂ ಅಲ್ಲಿನ ಪ್ರಮುಖ ಪತ್ರಿಕೆಗಳ ಮುಖಪುಟ ಸಂಪೂರ್ಣ ಕೊಹ್ಲಿಮಯವಾಗಿದ್ದು, ಟಿವಿ ಮಾಧ್ಯಮಗಳಲ್ಲೂ ಕೂಡಾ ಕೊಹ್ಲಿಯೇ ಪ್ರಮುಖ ಚರ್ಚಾ ವಿಷಯವಾಗಿದ್ದಾರೆ. ‘ಕಿಂಗ್ ಕೊಹ್ಲಿ ರಿಟರ್ನ್ಸ್’, ‘ಕೊಹ್ಲಿವುಡ್’, ‘ಲೆಜೆಂಡ್’ ಎಂದು ಕೊಹ್ಲಿಯನ್ನು ಬಣ್ಣಿಸುತ್ತಿವೆ.ಇನ್ನು, ಆಸೀಸ್ ತಂಡ ಆಟಗಾರರಂತೂ ತಿಂಗಳುಗಳ ಹಿಂದೆಯೇ ಕೊಹ್ಲಿ ಬಗ್ಗೆ ಹೇಳಿಕೆ ನೀಡಲು ಶುರು ಮಾಡಿದ್ದಾರೆ. ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು ಕೂಡಾ ಕೊಹ್ಲಿಯ ಆಟ, ಅವರನ್ನು ಕಟ್ಟಿಹಾಕಬೇಕಾದ ರೀತಿ, ಸರಣಿಯಲ್ಲಿ ಅವರ ಪ್ರಭಾವದ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ಕೂಡಾ ಕೊಹ್ಲಿ ಆಟವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.ಎಲ್ಲೆಲ್ಲೂ ಕೊಹ್ಲಿಯೇ ‘ನಾಯಕ’: ಕಳೆದ ಬಾರಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಕೊಹ್ಲಿ ತಂಡದ ನಾಯಕರಾಗಿದ್ದರು. ಈ ಬಾರಿ ಅವರು ನಾಯಕತ್ವದಲ್ಲಿಲ್ಲ. ಆದರೆ ಆಸ್ಟ್ರೇಲಿಯಾದ ಪ್ರಮುಖ ಮಾಧ್ಯಮಗಳು, ಕ್ರೀಡಾ ವೆಬ್‌ಸೈಟ್‌ಗಳಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಜೊತೆ ವಿರಾಟ್ ಕೊಹ್ಲಿಯೇ ಮಿಂಚುತ್ತಿದ್ದಾರೆ. ಭಾರತಕ್ಕೆ ಖಾಯಂ ನಾಯಕರಾಗಿ ರೋಹಿತ್ ಶರ್ಮಾ, ಹಂಗಾಮಿ ನಾಯಕರಾಗಿ ಜಸ್‌ಪ್ರೀತ್ ಬೂಮ್ರಾ ಇದ್ದರೂ ಆಸೀಸ್ ಮಾಧ್ಯಮಗಳು ಕೊಹ್ಲಿಯ ಫೋಟೋಗಳನ್ನೇ ಬಳಸುತ್ತಿವೆ.
ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತ ದಾಖಲೆ ಹೊಂದಿರುವ ವಿರಾಟ್ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ, ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಕೊಹ್ಲಿ 2011ರ ಬಳಿಕ ಆಸ್ಟ್ರೇಲಿಯಾದಲ್ಲಿ 13 ಟೆಸ್ಟ್ ಪಂದ್ಯಗಳನ್ನಾಡಿದ್ದು, 54.08ರ ಸರಾಸರಿಯಲ್ಲಿ 1352 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ, 4 ಅರ್ಧಶತಕಗಳೂ ಒಳಗೊಂಡಿವೆ. 2014-15ರ ಸರಣಿಯ 4 ಪಂದ್ಯಗಳಲ್ಲಿ ವಿರಾಟ್ 86.50ರ ಸರಾಸರಿಯಲ್ಲಿ 4 ಶತಕಗಳನ್ನೊಳಗೊಂಡ 692 ರನ್ ಕಲೆಹಾಕಿದ್ದಾರೆ. ಒಟ್ಟಾರೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಕೊಹ್ಲಿ 25 ಪಂದ್ಯಗಳನ್ನಾಡಿದ್ದು, 47.48ರ ಸರಾಸರಿಯಲ್ಲಿ 2042 ರನ್ ಗಳಿಸಿದ್ದಾರೆ. 8 ಶತಕ, 5 ಅರ್ಧಶತಕಗಳನ್ನು ಬಾರಿಸಿದ್ದಾರೆ.06 ಶತಕ: ಕೊಹ್ಲಿ ಆಸ್ಟ್ರೇಲಿಯಾದಲ್ಲಿ 6 ಟೆಸ್ಟ್ ಶತಕ ಬಾರಿಸಿದ್ದಾರೆ. ಇದು ಭಾರತೀಯರ ಪೈಕಿ ಜಂಟಿ ಗರಿಷ್ಠ. ಸಚಿನ್ ಕೂಡಾ 6 ಶತಕ ಸಿಡಿಸಿದ್ದಾರೆ.54.08 ಸರಾಸರಿ: ಕೊಹ್ಲಿ ಆಸ್ಟ್ರೇಲಿಯಾದಲ್ಲಿ 54.08 ಟೆಸ್ಟ್ ಸರಾಸರಿ ಹೊಂದಿದ್ದಾರೆ. ಇದು ಭಾರತದ ಹೊರಗಡೆ ಕೊಹ್ಲಿಯ ಶ್ರೇಷ್ಠ ಸರಾಸರಿ.
ಚಾಂಪಿಯನ್ ಆಟಗಾರ: ಸ್ಪಿನ್ನರ್ ನೇಥನ್ ಲಯನ್ವಿರಾಟ್ ಕೊಹ್ಲಿ ಚಾಂಪಿಯನ್ ಆಟಗಾರ. ಅವರ ದಾಖಲೆಗಳೇ ಇದನ್ನು ಸಾಬೀತುಪಡಿಸುತ್ತದೆ. ಚಾಂಪಿಯನ್‌ಗಳನ್ನು ಯಾವತ್ತೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಕೊಹ್ಲಿ ಬಗ್ಗೆ ತುಂಬಾ ಗೌರವವಿದೆ. ಸರಣಿಯಲ್ಲಿ ಅವರನ್ನು ಔಟ್ ಮಾಡುವುದೇ ನನ್ನ ಪ್ರಮುಖ ಗುರಿ. ಆದರೆ ಅದು ಸವಾಲಿನ ಕೆಲಸ. ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಈ ಯುಗದ ಅತ್ಯಂತ ಶ್ರೇಷ್ಠ ಬ್ಯಾಟರ್‌ಗಳು.ಕೊಹ್ಲಿಯನ್ನು ಕೆಣಕಬೇಡಿ: ಮಾಜಿ ಆಸೀಸ್ ಆಟಗಾರ ಶೇನ್ ವಾಟ್ಸನ್
ಆಸ್ಟ್ರೇಲಿಯಾ ಆಟಗಾರರು ಕೊಹ್ಲಿಯನ್ನು ಅವರ ಪಾಡಿಗೆ ಬಿಡಬೇಕು. ಅವರನ್ನು ಕೆಣಕುವ ಸಾಹಸ ಬೇಡ. ಕೊಹ್ಲಿಯ ಒಳಗೆ ಬೆಂಕಿ ಪ್ರಕಾಶಮಾನವಾಗಿ ಉರಿಯುತ್ತಿದೆ. ಅದು ಹೊರಬರದಂತೆ ನೋಡಬೇಕು. ಒಂದು ವೇಳೆ ಕೊಹ್ಲಿ ತಮ್ಮ ನೈಜ ಆಟ ಪ್ರದರ್ಶಿಸಿದರೆ ಅವರನ್ನು ನಿಯಂತ್ರಿಸುವುದು ಕಷ್ಟ. ಕೊಹ್ಲಿಯ ಶ್ರೇಷ್ಠ ಆಟವಾಡಿದರೆ ಅವರು ಆಸ್ಟ್ರೇಲಿಯಾವನ್ನು ಮುಳುಗಿಸಿಬಿಡುತ್ತಾರೆ.ದೇಹವನ್ನು ಗುರಿಮಾಡಿ: ಆಸೀಸ್ ಮಾಜಿ ಕ್ರಿಕೆಟಿಗ ಇಯಾನ್ ಹೀಲಿಆಸ್ಟ್ರೇಲಿಯಾದ ವೇಗದ ಬೌಲರ್‌ಗಳು ಕೊಹ್ಲಿ ವಿರುದ್ಧ ಹೇಗೆ ಬೌಲ್ ಮಾಡುತ್ತಾರೆ ಎಂಬುದು ನಿರ್ಣಾಯಕ. ವೇಗಿಗಳು ಕೊಹ್ಲಿಯ ಕಾಲನ್ನು ಗುರಿಯಾಗಿಸಬೇಕು. ಫ್ರಂಟ್ ಫೂಟ್‌ನಲ್ಲಿ ಕೊಹ್ಲಿ ಉತ್ತಮವಾಗಿ ಆಡುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಅವರ ಭುಜದ ಎತ್ತರಕ್ಕೆ ಬೌಲ್ ಮಾಡಬೇಕು. ಅವರ ದೇಹವನ್ನು ಗುರಿ ಮಾಡಿ ಬೌನ್ಸರ್‌ಗಳನ್ನು ಎಸೆಯಬೇಕು.