ಸಾರಾಂಶ
ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಗಣ್ಯರು, ರಾಜಕಾರಣಿಗಳ ಜೊತೆಗೆ ಪ್ರಮುಖ, ತಾರಾ ಕ್ರಿಕೆಟಿಗರಿಗೂ ಆಹ್ವಾನ ನೀಡಲಾಗಿದೆ.
ರಾಮ ಮಂದಿರದ ಟ್ರಸ್ಟ್ ಅಧಿಕೃತರು ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ.
ಜೊತೆಗೆ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ‘ಕ್ರಿಕೆಟ್ ದೇವರು’ ಸಚಿನ್ ತೆಂಡುಲ್ಕರ್ ಅವರಿಗೂ ಟ್ರಸ್ಟ್‌ನ ಸದಸ್ಯರು ಅಧಿಕೃತ ಆಹ್ವಾನ ನೀಡಿದ್ದಾರೆ. ಕ್ರಿಕೆಟಿಗರಿಗೆ ಆಹ್ವಾನ ಪತ್ರ ನೀಡುತ್ತಿರುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ಸದ್ಯ ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿದ್ದು, ಜ.20ರಿಂದ ಇಂಗ್ಲೆಂಡ್ ವಿರುದ್ಧ ಸರಣಿಗೆ ಅಭ್ಯಾಸ ಆರಂಭಿಸಲಿದ್ದಾರೆ. ಅಭ್ಯಾಸದ ನಡುವೆ ಅಂದರೆ ಜ.22ರಂದು ಅವರು ಅಯೋಧ್ಯೆಗೆ ತೆರಳಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಅದಕ್ಕಾಗಿ ವಿರಾಟ್ ಕೊಹ್ಲಿ ಈಗಾಗಲೇ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಧೋನಿ ವಿರುದ್ಧ ಮಾನನಷ್ಟ ಕೇಸ್ ಹೂಡಿದ ದಿವಾಕರ್
ಡೆಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಎಂ.ಎಸ್.ಧೋನಿ ವಿರುದ್ಧ ಉದ್ಯಮಿ ಮಿಹಿರ್ ದಿವಾಕರ್, ಅವರ ಪತ್ನಿ ಸೌಮ್ಯಾ ದಾಸ್ ಡೆಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿಚಾರಣೆ ಜ.18ರಂದು ನಡೆಯಲಿದೆ. ಆರ್ಕಾ ಸ್ಪೋರ್ಟ್ಸ್ ಅಕಾಡೆಮಿ ವಿಚಾರದಲ್ಲಿ ತಮಗೆ ಪಾಲುದಾರರಾಗಿರುವ ದಿವಾಕರ್, ಸೌಮ್ಯ 16 ಕೋಟಿ ರು. ವಂಚನೆ ಎಸಗಿದ್ದಾಗಿ ಧೋನಿ ಇತ್ತೀಚೆಗೆ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.