ಕೊಹ್ಲಿ-ಕೃನಾಲ್‌ ಮ್ಯಾಜಿಕ್‌: ಆರ್‌ಸಿಬಿ ಮತ್ತೆ ನಂ.1

| N/A | Published : Apr 28 2025, 10:25 AM IST

DC vs RCB IPL 2025 46th match

ಸಾರಾಂಶ

ತವರಿನಾಚೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪಂದ್ಯ ಗೆಲ್ಲುವುದು ಈಗ ಆರ್‌ಸಿಬಿಗೆ ಹವ್ಯಾಸವಾಗಿಬಿಟ್ಟಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಭಾನುವಾರ ಆರ್‌ಸಿಬಿ ಜೈಕಾರ ಮೊಳಗಿಸಿದ್ದು ನವದೆಹಲಿಯಲ್ಲಿ

ನವದೆಹಲಿ: ತವರಿನಾಚೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಪಂದ್ಯ ಗೆಲ್ಲುವುದು ಈಗ ಆರ್‌ಸಿಬಿಗೆ ಹವ್ಯಾಸವಾಗಿಬಿಟ್ಟಿದೆ. ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಭಾನುವಾರ ಆರ್‌ಸಿಬಿ ಜೈಕಾರ ಮೊಳಗಿಸಿದ್ದು ನವದೆಹಲಿಯಲ್ಲಿ. ಮ್ಯಾಜಿಕಲ್‌ ಬೌಲಿಂಗ್‌ ದಾಳಿ ಹಾಗೂ ಅತ್ಯಮೋಘ ಚೇಸ್‌ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆರ್‌ಸಿಬಿ ಭಾನುವಾರದ ಪಂದ್ಯದಲ್ಲಿ 6 ವಿಕೆಟ್‌ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಆರ್‌ಸಿಬಿ ಈ ಬಾರಿ 10 ಪಂದ್ಯಗಳನ್ನಾಡಿದ್ದು, ಒಟ್ಟು 7 ಗೆಲುವು ಸಾಧಿಸಿದೆ. ಇದರಲ್ಲಿ 6 ಪಂದ್ಯ ಗೆದ್ದಿದ್ದು ತವರಿನ ಆಚೆ. ಅತ್ತ ಡೆಲ್ಲಿ ತಂಡ ಆಡಿರುವ 9ರಲ್ಲಿ 3ನೇ ಸೋಲು ಕಂಡಿದ್ದು, 4ನೇ ಸ್ಥಾನಕ್ಕೆ ಕುಸಿದಿದೆ.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕಲೆಹಾಕಿದ್ದು 8 ವಿಕೆಟ್‌ಗೆ 162 ರನ್‌. ಡೆಲ್ಲಿ ನೀಡಿದ ಗುರಿ ದೊಡ್ಡದೇನೂ ಆಗಿರಲಿಲ್ಲ. ಆದರೆ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದರೂ ಪಾರಾಗಿ ಬಂದ ತಂಡ 18.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಆರ್‌ಸಿಬಿ ಆರಂಭ ಉತ್ತಮವಾಗಿತ್ತು. 2 ಓವರ್‌ಗಳಲ್ಲಿ 19 ರನ್‌ ಬಂತು. ಆದರೆ 3ನೇ ಓವರ್‌ನಲ್ಲಿ ಜೇಕಬ್‌ ಬೆಥೆಲ್‌ ಹಾಗೂ ದೇವದತ್‌ ಪಡಿಕ್ಕಲ್‌ರನ್ನು ಔಟ್‌ ಮಾಡಿದ ಡೆಲ್ಲಿ ನಾಯಕ ಅಕ್ಷರ್‌ ಪಟೇಲ್‌ ಪಂದ್ಯದ ಗತಿ ಬದಲಿಸಿದರು. ಮುಂದಿನ ಓವರ್‌ನಲ್ಲಿ ರಜತ್‌ ಪಾಟೀದಾರ್‌ ರನೌಟ್‌ ಆಗಿದ್ದು ಆರ್‌ಸಿಬಿಯನ್ನು ಮತ್ತಷ್ಟು ಕಂಗೆಡಿಸಿತು. ಪವರ್‌-ಪ್ಲೇ ಅಂತ್ಯಕ್ಕೆ ತಂಡದ ಸ್ಕೋರ್ 3 ವಿಕೆಟ್‌ಗೆ 35. ಆ ಬಳಿಕವೂ ರನ್‌ ವೇಗ ಕುಸಿದಿದ್ದರಿಂದ 10 ಓವರ್‌ಗಳಲ್ಲಿ ತಂಡ 64 ರನ್‌ ಗಳಿಸಿತ್ತು.

ಚೇಸ್‌ ಮಾಸ್ಟರ್‌ ವಿರಾಟ್ ಕೊಹ್ಲಿ ಜೊತೆಗೂಡಿದ ಕೃನಾಲ್‌ ಪಾಂಡ್ಯ ಸೋಲಬೇಕಿದ್ದ ತಂಡವನ್ನು ಗೆಲ್ಲಿಸಿದರು. ಜವಾಬ್ದಾರಿಯುತ ಆಟವಾಡಿ, ನಡು ನಡುವೆ ಚೆಂಡನ್ನು ಬೌಂಡರಿ ಗೆರೆಯಾಚೆ ದಾಟಿಸುತ್ತಿದ್ದ ಕೃನಾಲ್‌, ತಂಡದ ಆಪತ್ಬಾಂಧವರಾಗಿ ಮೂಡಿಬಂದರು. ಇವರಿಬ್ಬರು 3ನೇ ವಿಕೆಟ್‌ಗೆ 119 ರನ್‌ ಸೇರಿಸಿದರು. 47 ಎಸೆತಕ್ಕೆ 51 ರನ್‌ ಗಳಿಸಿದ ಕೊಹ್ಲಿ 18ನೇ ಓವರಲ್ಲಿ ಔಟಾದರೂ, ತಂಡಕ್ಕೆ ಸಮಸ್ಯೆಯಾಗಲಿಲ್ಲ. ಟಿಮ್‌ ಡೇವಿಡ್‌ 5 ಎಸೆತಕ್ಕೆ 19 ರನ್‌ ಸಿಡಿಸಿ ಗೆಲ್ಲಿಸಿದರು. ಕೃನಾಲ್‌ 47 ಎಸೆತಕ್ಕೆ 73 ರನ್‌ ಬಾರಿಸಿ, ಗೆಲುವಿನ ರೂವಾರಿಯಾದರು.

ಮಾರಕ ದಾಳಿ: ಆರ್‌ಸಿಬಿ ಬೌಲಿಂಗ್‌ ಅದೆಷ್ಟು ಮನಮೋಹಕವಾಗಿತ್ತೆಂದರೆ, ಡೆಲ್ಲಿ ಒಂದೊಂದು ಬೌಂಡರಿ ಬಾರಿಸಲೂ ತ್ರಾಸಪಡಬೇಕಾಗಿತ್ತು. ರಾಹುಲ್‌ 41 ರನ್‌ ಬಾರಿಸಲು 39 ಎಸೆತ ತೆಗೆದುಕೊಂಡರು. ಆದರೆ ಕೊನೆಯಲ್ಲಿ ಟ್ರಿಸ್ಟನ್‌ ಸ್ಟಬ್ಸ್ 18 ಎಸೆತಕ್ಕೆ 34 ರನ್‌ ಬಾರಿಸಿದ್ದು ತಂಡಕ್ಕೆ ನೆರವಾಯಿತು. ಉಳಿದಂತೆ ಅಭಿಷೇಕ್‌ ಪೊರೆಲ್ 28, ಡು ಪ್ಲೆಸಿ 22 ರನ್‌ ಕೊಡುಗೆ ನೀಡಿದರು. ಭುವನೇಶ್ವರ್‌ 3, ಹೇಜಲ್‌ವುಡ್ 2 ವಿಕೆಟ್‌ ಕಿತ್ತರು.

ಸ್ಕೋರ್‌: ಡೆಲ್ಲಿ 20 ಓವರಲ್ಲಿ 162/8 (ರಾಹುಲ್‌ 41, ಸ್ಟಬ್ಸ್‌ 34, ಭುವನೇಶ್ವರ್‌ 3-33, ಹೇಜಲ್‌ವುಡ್‌ 2-36), ಆರ್‌ಸಿಬಿ 18.3 ಓವರಲ್ಲಿ 165/4 (ಕೃನಾಲ್‌ ಔಟಾಗದೆ 73, ಕೊಹ್ಲಿ 51, ಅಕ್ಷರ್‌ 2-19)

ಪಂದ್ಯಶ್ರೇಷ್ಠ: ಕೃನಾಲ್‌ ಪಾಂಡ್ಯ

ತವರಿನಾಚೆ ಸತತ ಆರು

ಜಯ: ಆರ್‌ಸಿಬಿ ದಾಖಲೆ

ಆರ್‌ಸಿಬಿ ಐಪಿಎಲ್‌ ಇತಿಹಾಸದಲ್ಲೇ ತವರಿನಾಚೆ ಕ್ರೀಡಾಂಗಣಗಳಲ್ಲಿ ಸತತ 6 ಪಂದ್ಯಗಳಲ್ಲಿ ಗೆದ್ದ ಮೊದಲ ತಂಡ ಎನಿಸಿಕೊಂಡಿತು. ಆರ್‌ಸಿಬಿ ಈ ಬಾರಿ ಕೋಲ್ಕತಾ, ಚೆನ್ನೈ, ಮುಂಬೈ, ಜೈಪುರ, ಚಂಡೀಗಢ ಹಾಗೂ ಡೆಲ್ಲಿ ಕ್ರೀಡಾಂಗಣಗಳಲ್ಲಿ ಜಯಗಳಿಸಿದೆ.