ಇಂಗ್ಲೆಂಡ್‌ ವಿರುದ್ಧ ಕೊನೆ 3 ಟೆಸ್ಟ್‌ಗೂ ಇಲ್ಲ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಹೊರಕ್ಕೆ!

| Published : Feb 11 2024, 01:45 AM IST / Updated: Feb 11 2024, 01:05 PM IST

Virat Kohli-Shreyas Iyer
ಇಂಗ್ಲೆಂಡ್‌ ವಿರುದ್ಧ ಕೊನೆ 3 ಟೆಸ್ಟ್‌ಗೂ ಇಲ್ಲ ಕೊಹ್ಲಿ, ಶ್ರೇಯಸ್‌ ಅಯ್ಯರ್‌ ಹೊರಕ್ಕೆ!
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲೆಂಡ್‌ ವಿರುದ್ಧ ಕೊನೆ 3 ಟೆಸ್ಟ್‌ಗೆ ಭಾರತ ತಂಡ ಪ್ರಕಟವಾಗಿದ್ದು, ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಕೊನೆಯ 3 ಟೆಸ್ಟ್‌ಗಳಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ. ಇದೇ ವೇಳೆ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ರನ್ನು ತಂಡದಿಂದ ಕೈಬಿಡಲಾಗಿದೆ.

ನವದೆಹಲಿ: ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ವಿರುದ್ಧದ ಕೊನೆಯ 3 ಟೆಸ್ಟ್‌ಗಳಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಸರಣಿಯಿಂದಲೇ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

 3ನೇ ಟೆಸ್ಟ್‌ ಫೆ.15ರಿಂದ ರಾಜ್‌ಕೋಟ್‌ನಲ್ಲಿ ಆರಂಭಗೊಳ್ಳಿದ್ದು, ಫೆ.23ರಿಂದ ರಾಂಚಿಯಲ್ಲಿ 4ನೇ, ಮಾ.7ರಿಂದ ಧರ್ಮಶಾಲಾದಲ್ಲಿ 5ನೇ ಹಾಗೂ ಕೊನೆಯ ಟೆಸ್ಟ್‌ ನಡೆಯಲಿದೆ. 

ಶುಕ್ರವಾರ ಸಂಜೆ ಅಜಿತ್‌ ಅಗರ್ಕರ್‌ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಸಭೆ ಸೇರಿ ಆಯ್ಕೆ ಮಾಡಿದ್ದ ತಂಡವನ್ನು ಶನಿವಾರ ಬೆಳಗ್ಗೆ ಪ್ರಕಟಿಸಲಾಯಿತು.

ಇದೇ ವೇಳೆ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ರನ್ನು ತಂಡದಿಂದ ಕೈಬಿಡಲಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಶ್ರೇಯಸ್‌ ವಿಶ್ರಾಂತಿ ಬಯಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆಯಾದರೂ, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತಂಡದ ಅಗತ್ಯತೆಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿರುವ ಕಾರಣ ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

 ರಾಹುಲ್‌, ಜಡೇಜಾಗೆ ಸ್ಥಾನ: ಗಾಯದ ಸಮಸ್ಯೆಯಿಂದಾಗಿ 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದ ಕೆ.ಎಲ್‌.ರಾಹುಲ್‌ ಹಾಗೂ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾಗಿದ್ದು, ಸಂಪೂರ್ಣ ಫಿಟ್‌ ಇದ್ದರಷ್ಟೇ 3ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಆಕಾಶ್‌ಗೆ ಅವಕಾಶ: 17 ಸದಸ್ಯರ ತಂಡದಲ್ಲಿರುವ ಏಕೈಕ ಹೊಸ ಮುಖ ಬಂಗಾಳದ ವೇಗಿ ಆಕಾಶ್‌ ದೀಪ್‌. ದೇಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

 ಜಡೇಜಾ, ಸಿರಾಜ್‌ ತಂಡಕ್ಕೆ ವಾಪಸಾಗಿರುವ ಕಾರಣ ಸೌರಭ್‌ ಕುಮಾರ್‌, ಆವೇಶ್‌ ಖಾನ್‌ರನ್ನು ತಂಡದಿಂದ ಕೈಬಿಡಲಾಗಿದೆ.

ಭಾರತ ತಂಡ: ರೋಹಿತ್‌ (ನಾಯಕ), ಜಸ್‌ಪ್ರೀತ್‌ ಬೂಮ್ರಾ(ಉಪನಾಯಕ), ಯಶಸ್ವಿ, ಶುಭ್‌ಮನ್‌ ಗಿಲ್‌, ರಾಹುಲ್‌, ರಜತ್‌ ಪಾಟೀದಾರ್‌, ಸರ್ಫರಾಜ್‌, ಧೃವ್‌ ಜುರೆಲ್‌, ಕೆ.ಎಸ್‌.ಭರತ್‌, ಆರ್‌.ಅಶ್ವಿನ್‌, ಜಡೇಜಾ, ಅಕ್ಷರ್‌, ವಾಷಿಂಗ್ಟನ್‌, ಕುಲ್ದೀಪ್‌, ಸಿರಾಜ್‌, ಮುಕೇಶ್‌, ಆಕಾಶ್‌ದೀಪ್‌.

01 ಸರಣಿ ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಟು 13 ವರ್ಷಗಳಾಗಿದ್ದು, ಇದೇ ಮೊದಲ ಬಾರಿಗೆ ಅವರಿಲ್ಲದೆ ಭಾರತ ತಂಡ ಟೆಸ್ಟ್‌ ಸರಣಿವೊಂದನ್ನು ಆಡುತ್ತಿದೆ.