ಭಾರತ ತಂಡದ ಆಟಗಾರರು 2 ಬ್ಯಾಚ್‌ಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು. ಆದರೆ ವಿರಾಟ್‌ ಕೊಹ್ಲಿ ಮಾತ್ರ ಇನ್ನೂ ತವರಿನಲ್ಲೇ ಬಾಕಿಯಾಗಿದ್ದಾರೆ.

ನ್ಯೂಯಾರ್ಕ್‌: ಟಿ20 ವಿಶ್ವಕಪ್‌ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಭಾರತ ತಂಡದ ಆಟಗಾರರು ಅಭ್ಯಾಸ ಕೂಡಾ ಆರಂಭಿಸಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಮಾತ್ರ ಅಮೆರಿಕ ತಲುಪಿಲ್ಲ.

ಸದ್ಯ ಭಾರತ ತಂಡದ ಎಲ್ಲಾ ಆಟಗಾರರು ನ್ಯೂಯಾರ್ಕ್‌ ತಲುಪಿದ್ದಾರೆ. ಐಪಿಎಲ್‌ ಬಳಿಕ ಅಲ್ಪ ಬಿಡುವು ಪಡೆದಿದ್ದ ವಿರಾಟ್‌ ಕೊಹ್ಲಿ ಶುಕ್ರವಾರ ನ್ಯೂಯಾರ್ಕ್‌ಗೆ ತೆರಳಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದರೆ ಅವರು ಬಾಂಗ್ಲಾದೇಶ ವಿರುದ್ಧ ಜೂ.1ಕ್ಕೆ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೊ ಅಥವಾ ಗೈರಾಗಲಿದ್ದಾರೊ ಎಂಬುದು ಇನ್ನೂ ಖಚಿತವಾಗಿಲ್ಲ.

ತಂಡದ ಆಟಗಾರರು 2 ಬ್ಯಾಚ್‌ಗಳಲ್ಲಿ ಅಮೆರಿಕಕ್ಕೆ ತೆರಳಿದ್ದರು. ರೋಹಿತ್‌, ಬೂಮ್ರಾ, ಜಡೇಜಾ ಸೇರಿ ಪ್ರಮುಖರು ಮೊದಲ ವಿಮಾನದಲ್ಲಿ ತೆರಳಿದ್ದರೆ, ಸಂಜು ಸೇರಿ ಇತರರು 2ನೇ ಹಂತದಲ್ಲಿ ಪ್ರಯಾಣಿಸಿದ್ದರು. ಆದರೆ ಕೊಹ್ಲಿ ಮಾತ್ರ ತವರಿನಲ್ಲೇ ಬಾಕಿಯಾಗಿದ್ದಾರೆ.

ಬುಧವಾರ ನಾಯಕ ರೋಹಿತ್‌ ಶರ್ಮಾ, ಉಪನಾಯಕ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ರಿಷಭ್‌ ಪಂತ್‌, ಮೊಹಮದ್ ಸಿರಾಜ್‌, ಸೂರ್ಯಕುಮಾರ್‌ ಯಾದವ್‌, ಕುಲ್ದೀಪ್‌ ಯಾದವ್‌, ಸಂಜು ಸ್ಯಾಮ್ಸನ್‌, ಅರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ ಸೇರಿದಂತೆ ಬಹುತೇಕ ಆಟಗಾರರು ಕೆಲ ಕಾಲ ಜಾಗಿಂಗ್‌ ನಡೆಸಿ, ಫುಟ್ಬಾಲ್‌ ಆಡಿದರು. ಸಹಾಯಕ ಸಿಬ್ಬಂದಿ ಕೂಡಾ ಆಟಗಾರರ ಜೊತೆ ಕಾಣಿಸಿಕೊಂಡರು.

ಭಾರತ ಟೂರ್ನಿಯಲ್ಲಿ ಜೂ.5ರಂದು ಐರ್ಲೆಂಡ್‌ ವಿರುದ್ಧ ಗುಂಪು ಹಂತದ ಮೊದಲ ಪಂದ್ಯವಾಡಲಿದೆ. ಬಳಿಕ ಜೂ.9ರಂದು ಬದ್ಧವೈರಿ ಪಾಕಿಸ್ತಾನ, ಜೂ.12ರಂದು ಅಮೆರಿಕ ಹಾಗೂ ಜೂ.15ರಂದು ಕೊನೆ ಪಂದ್ಯದಲ್ಲಿ ಕೆನಡಾ ವಿರುದ್ಧ ಸೆಣಸಾಡಲಿದೆ.