ಸಾರಾಂಶ
ಕಟಕ್: ಮಂಡಿ ನೋವಿನಿಂದಾಗಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಭಾನುವಾರ ನಡೆಯಲಿರುವ ಎರಡನೇ ಪಂದ್ಯಕ್ಕೆ ಮರಳಲಿದ್ದಾರೆ ಎಂದು ಟೀಂ ಇಂಡಿಯಾದ ಉಪನಾಯಕ ಶುಭ್‌ಮನ್ ಗಿಲ್ ಹೇಳಿದ್ದಾರೆ.
ಕೊಹ್ಲಿ ಆರೋಗ್ಯದ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಗಿಲ್, ‘ಕೊಹ್ಲಿಗೆ ಆಗಿರುವ ಗಾಯ ಗಂಭೀರವಾದುದಲ್ಲ. ಅವರು ಅಭ್ಯಾಸದ ವೇಳೆ ಚೆನ್ನಾಗಿದ್ದರು. ಆದರೆ ಗುರುವಾರ ಬೆಳಿಗ್ಗೆ ಸ್ವಲ್ಪ ಮೊಣಕಾಲಿನ ಊತ ಕಾಣಿಸಿಕೊಂಡಿತು.
ಅವರು ಖಂಡಿತವಾಗಿಯೂ ಎರಡನೇ ಏಕದಿನ ಪಂದ್ಯಕ್ಕೆ ಮರಳಲಿದ್ದಾರೆ’ ಎಂದಿದ್ದಾರೆ.ಆರಂಭಿಕ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದ ವಿರಾಟ್, ತಂಡದಿಂದ ಹೊರಬಿದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಟಾಸ್ ವೇಳೆ ಮಾಹಿತಿ ನೀಡಿದ್ದ ನಾಯಕ ರೋಹಿತ್ ಶರ್ಮಾ, ‘ಕೊಹ್ಲಿ ನಿನ್ನೆ ರಾತ್ರಿ ಮಂಡಿ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಆಡುವುದಿಲ್ಲ’ ಎಂದಿದ್ದರು.
ಪಂದ್ಯಕ್ಕೂ ಮುನ್ನ ಕೊಹ್ಲಿ ಮಂಡಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಹೀಗಾಗಿ ಕೊಹ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಎನ್‌ಸಿಎಗೆ ಆಗಮಿಸಲಿದ್ದಾರೊ ಅಥವಾ 2ನೇ ಪಂದ್ಯಕ್ಕಾಗಿ ತಂಡದ ಜೊತೆ ಕಟಕ್‌ಗೆ ತೆರಳಲಿದ್ದಾರೊ ಎಂಬ ಗೊಂದಲ ಎದುರಾಗಿತ್ತು.