ಚೆಪಾಕ್‌ನಲ್ಲೇ ಥಲಾ ಟೀಂ ತತ್ತರ : ಸೋಲಿನಿಂದ ಪಾಠ ಕಲಿಯದ ಚೆನ್ನೈಗೆ ಮತ್ತೆ ಹೀನಾಯ ಸೋಲು

| N/A | Published : Apr 12 2025, 12:49 AM IST / Updated: Apr 12 2025, 04:20 AM IST

ಸಾರಾಂಶ

ಕೆಕೆಆರ್‌ಗೆ 8 ವಿಕೆಟ್‌ ಭರ್ಜರಿ ಗೆಲುವು. ಟೆಸ್ಟ್‌ ಆಡಿದ ಚೆನ್ನೈ 9ಕ್ಕೆ 103 ರನ್‌. 10.1 ಓವರಲ್ಲೇ ಗೆದ್ದ ಕೆಕೆಆರ್‌. ಚೆನ್ನೈಗೆ 5ನೇ ಸೋಲು

ಚೆನ್ನೈ: ಋತುರಾಜ್‌ ಗಾಯಕ್ವಾಡ್‌ ಗಾಯದಿಂದಾಗಿ ಹೊರಬಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೆ ‘ಥಲಾ’ ಖ್ಯಾತಿಯ ಎಂ.ಎಸ್‌.ಧೋನಿ ನಾಯಕರಾದರೂ ತಂಡದ ಸೋಲಿನ ಪರಂಪರೆ ಮುಂದುವರಿದಿದೆ. ಸೋಲಿನಿಂದ ಪಾಠ ಕಲಿಯದಂತಿರುವ ಚೆನ್ನೈಯನ್ನು ಶುಕ್ರವಾರ ಹಾಲಿ ಚಾಂಪಿಯನ್‌ ಕೋಲ್ಕತಾ 8 ವಿಕೆಟ್‌ಗಳಿಂದ ಬಗ್ಗುಬಡಿಯಿತು. 6 ಪಂದ್ಯಗಳಲ್ಲಿ 5ನೇ ಸೋಲು ಕಂಡ ಚೆನ್ನೈ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಬಾಕಿಯಾದರೆ, ಕೋಲ್ಕತಾ 6 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿ 3ನೇ ಸ್ಥಾನಕ್ಕೇರಿತು.

ಕಳೆದ 4 ಪಂದ್ಯಗಳಲ್ಲಿ ಚೇಸಿಂಗ್‌ ವೇಳೆ ಸೋತಿದ್ದ ಸಿಎಸ್‌ಕೆಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡುವ ಅವಕಾಶ ಸಿಕ್ಕಿತು. ಆದರೆ ಬ್ಯಾಟಿಂಗ್ ಮರೆತಂತಿದ್ದ ಆಟಗಾರರು ಒಂದೊಂದು ರನ್ ಗಳಿಸಲೂ ಪರದಾಡಿದರು. 

ಚೆನ್ನೈ 9 ವಿಕೆಟ್‌ಗೆ 103 ರನ್‌ ಗಳಿಸಿತು. ಈ ಗುರಿ ಕೆಕೆಆರ್‌ಗೆ ಸುಲಭ ತುತ್ತಾಯಿತು. 10.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಗೆಲುವು ತನ್ನದಾಗಿಸಿಕೊಂಡಿತು.ಪವರ್‌ಪ್ಲೇ ಓವರ್‌ಗಳಲ್ಲೇ ತಂಡ 71 ರನ್‌ ಚಚ್ಚಿತು. ಸುನಿಲ್‌ ನರೈನ್‌ ಸ್ಫೋಟಕ ಆಟದ ಮೂಲಕ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಕೇವಲ 18 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 44 ರನ್‌ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಕ್ವಿಂಟನ್‌ ಡಿ ಕಾಕ್‌ 23, ನಾಯಕ ಅಜಿಂಕ್ಯಾ ರಹಾನೆ 20 ರನ್‌ ಗಳಿಸಿದರು. 

ಬ್ಯಾಟರ್ಸ್‌ ನಿರುತ್ತರ: ಇದಕ್ಕೂ ಮುನ್ನ ಸಿಎಸ್‌ಕೆ ಬ್ಯಾಟರ್‌ಗಳನ್ನು ಕೆಕೆಆರ್ ಸ್ಪಿನ್ನರ್‌ಗಳಾದ ಸುನಿಲ್‌ ನರೈನ್‌, ಮೊಯೀನ್‌ ಅಲಿ, ವರುಣ್‌ ಚಕ್ರವರ್ತಿ ಕಟ್ಟಿಹಾಕಿದರು. ಮೊದಲ 5 ಓವರ್‌ಗಳಲ್ಲಿ 18 ರನ್‌ಗೆ 2 ವಿಕೆಟ್‌ ಕಳೆದುಕೊಂಡ ತಂಡ ಮತ್ತೆ ಚೇತರಿಸಿಕೊಳ್ಳಲಿಲ್ಲ. ವಿಜಯ್‌ ಶಂಕರ್‌(29), ಶಿವಂ ದುಬೆ(ಔಟಾಗದೆ 31) ತಂಡದ ಮಾನ ಉಳಿಸಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧೋನಿ 4 ಎಸೆತಗಳಲ್ಲಿ ಗಳಿಸಿದ್ದು 1 ರನ್‌. ನರೈನ್‌ 4 ಓವರ್‌ಗಳಲ್ಲಿ ಕೇವಲ 13 ರನ್‌ಗೆ 3 ವಿಕೆಟ್‌ ಕಿತ್ತರೆ, ಮೊಯೀನ್‌ 1 ಮೇಡಿನ್‌ ಸಹಿತ 20 ರನ್‌ಗೆ 1 ವಿಕೆಟ್‌, ವರುಣ್‌ 22 ರನ್‌ಗೆ 2 ವಿಕೆಟ್‌ ಪಡೆದರು.

ಸ್ಕೋರ್‌: ಚೆನ್ನೈ 20 ಓವರಲ್ಲಿ 103/9 (ದುಬೆ ಔಟಾಗದೆ 31, ವಿಜಯ್‌ 29, ನರೈನ್‌ 3-13, ಹರ್ಷಿತ್‌ 2-16 ವರುಣ್‌ 2-22), ಕೋಲ್ಕತಾ 10.1 ಓವರಲ್ಲಿ 107/2 (ನರೈನ್‌ 44, ಡಿ ಕಾಕ್‌ 23, ನೂರ್‌ 1-8 )

ಪಂದ್ಯಶ್ರೇಷ್ಠ: ಸುನಿಲ್‌ ನರೈನ್‌

26 ವಿಕೆಟ್‌: ನರೈನ್‌ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ 26 ವಿಕೆಟ್‌ ಪಡೆದಿದ್ದಾರೆ. ಇದು 2ನೇ ಗರಿಷ್ಠ. ಮಾಲಿಂಗಾ 31 ವಿಕೆಟ್‌ ಕಿತ್ತಿದ್ದಾರೆ.

ಚೆನ್ನೈನ ಚೆಪಾಕ್‌ನಲ್ಲಿ 2ನೇ ಕನಿಷ್ಠ ಸ್ಕೋರ್‌

ಚೆನ್ನೈ ತಂಡ ಗಳಿಸಿದ 103 ರನ್‌, ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ದಾಖಲಾದ ಐಪಿಎಲ್‌ನ 2ನೇ ಕನಿಷ್ಠ ಮೊತ್ತ. 2019ರಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 70 ರನ್‌ಗೆ ಆಲೌಟಾಗಿದ್ದು ಈಗಲೂ ಕನಿಷ್ಠ ಮೊತ್ತವಾಗಿಯೇ ಉಳಿದಿದೆ.

ಮೊದಲ ಬಾರಿ ಚೆನ್ನೈಗೆ ಸತತ ಐದು ಸೋಲು!

ಚೆನ್ನೈ ತಂಡ ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತು. ಅಲ್ಲದೆ, ಚೆಪಾಕ್‌ ಕ್ರೀಡಾಂಗಣದಲ್ಲಿ ಆವೃತ್ತಿಯೊಂದರಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದು ಇದೇ ಮೊದಲು.