ಚೆನ್ನೈನಲ್ಲಿ ಕೋಲ್ಕತಾ ಚಂಡಮಾರುತ: 3ನೇ ಐಪಿಎಲ್‌ ಕಿರೀಟಕ್ಕೆ ಕೆಕೆಆರ್‌ ಕಿಸ್‌

| Published : May 27 2024, 01:00 AM IST / Updated: May 27 2024, 04:29 AM IST

ಸಾರಾಂಶ

ಫೈನಲ್‌ನಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ನ ಚೆಂಡಾಡಿ 8 ವಿಕೆಟ್‌ನಿಂದ ಭರ್ಜರಿಯಾಗಿ ಗೆದ್ದ ಕೆಕೆಆರ್‌. 2014ರ ಬಳಿಕ ಮತ್ತೆ ಚಾಂಪಿಯನ್‌ ಪಟ್ಟ. ಕೆಕೆಆರ್‌ ಬೌಲಿಂಗ್‌ಗೆ ತರಗೆಲೆಯಂತೆ ಉರುಳಿದ ಸನ್‌, 113ಕ್ಕೆ ಸರ್ವಪತನ. 10.3 ಓವರ್‌ನಲ್ಲೇ ಗೆದ್ದ ಕೆಕೆಆರ್‌. ಸನ್‌ 2ನೇ ಟ್ರೋಫಿ ಕನಸು ಭಗ್ನ

ಚೆನ್ನೈ: ಟೂರ್ನಿಯುದ್ದಕ್ಕೂ ಪರಾಕ್ರಮ ಮೆರೆದು ಎದುರಾಳಿಗಳ ನಿದ್ದೆಗೆಡಿಸಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 

ಸನ್‌ರೈಸರ್ಸ್‌ನ ಆಕ್ರಮಣಕಾರಿ ಆಟ ನಮ್ಮೆದುರು ನಡೆಯಲ್ಲ ಎಂಬಂತೆ ಅಬ್ಬರಿಸಿ ಬೊಬ್ಬಿರಿದ ಶ್ರೇಯಸ್‌ ಅಯ್ಯರ್‌ ಪಡೆ, ಭಾನುವಾರ ಚೆಪಾಕ್‌ನಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ 8 ವಿಕೆಟ್‌ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು. ಇದರೊಂದಿಗೆ ಕೆಕೆಆರ್‌ 3ನೇ ಬಾರಿ ಐಪಿಎಲ್‌ ಕಿರೀಟ ಧರಿಸಿದರೆ, ಸನ್‌ರೈಸರ್ಸ್‌ನ 2ನೇ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಯಿತು.ಈ ಬಾರಿ ಐಪಿಎಲ್‌ ಬೃಹತ್‌ ಮೊತ್ತಗಳಿಗೆ ಸಾಕ್ಷಿಯಾದರೂ, ರೋಚಕತೆಗೇನೂ ಕಮ್ಮಿಯಿರಲಿಲ್ಲ. 

ಆದರೆ ಫೈನಲ್‌ ಪಂದ್ಯ ಯಾರೂ ನಿರೀಕ್ಷಿಸದ ರೀತಿ ಕೆಕೆಆರ್‌ನ ಪರಾಕ್ರಮದ ಮುಂದೆ ಏಕಪಕ್ಷೀಯವಾಗಿ ನಡೆಯಿತು. ಯಾವುದೇ ಪೈಪೋಟಿ, ರೋಚಕತೆ ಇಲ್ಲದೆ ಫೈನಲ್‌ ಕೊನೆಗೊಂಡಿತು. ಬೃಹತ್‌ ಮೊತ್ತದ ಕನಸಿನೊಂದಿಗೆ ಬ್ಯಾಟಿಂಗ್‌ ಆಯ್ದುಕೊಂಡ ಸನ್‌ರೈಸರ್ಸ್‌, ಕೆಕೆಆರ್‌ನ ಬೆಂಕಿ ದಾಳಿ ಮುಂದೆ ತತ್ತರಿಸಿ 18.3 ಓವರಲ್ಲಿ 113ಕ್ಕೆ ಗಂಟುಮೂಟೆ ಕಟ್ಟಿತು. 

ಇದು ಕೆಕೆಆರ್‌ಗೆ ಯಾವುದಕ್ಕೂ ಸಾಲಲಿಲ್ಲ. ಕಡಿಮೆ ಮೊತ್ತವಾದರೂ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ಕೆಕೆಆರ್‌ 10.3 ಓವರಲ್ಲೇ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು.2ನೇ ಓವರಲ್ಲೇ ನರೈನ್‌(06) ವಿಕೆಟ್‌ ಉರುಳಿದರೂ, 2ನೇ ವಿಕೆಟ್‌ಗೆ ಜೊತೆಯಾದ ಗುರ್ಜಾಜ್‌ ಹಾಗೂ ವೆಂಕಟೇಶ್‌ ಅಯ್ಯರ್‌ 45 ಎಸೆತಗಳಲ್ಲಿ 91 ರನ್‌ ಸೇರಿಸಿದರು. 39 ರನ್‌ ಗಳಿಸಿದ್ದ ಗುರ್ಬಾಜ್‌ಗೆ 9ನೇ ಓವರಲ್ಲಿ ಶಾಬಾಜ್‌ ಪೆವಿಲಿಯನ್ ಹಾದಿ ತೋರಿದರೂ, ವೆಂಕಟೇಶ್‌(26 ಎಸೆತಗಳಲ್ಲಿ ಔಟಾಗದೆ 52) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸನ್‌ ಬರ್ನ್‌: ಟೂರ್ನಿಯುದ್ದಕ್ಕೂ ಬೌಲರ್‌ಗಳ ಮೇಲೆ ಸವಾರಿ ಮಾಡಿ ಹೈಸ್ಕೋರ್‌ ಪಂದ್ಯಗಳಿಗೆ ಕಾರಣವಾಗಿದ್ದ ಸನ್‌ರೈಸರ್ಸ್‌ಗೆ ಫೈನಲ್‌ನಲ್ಲಿ ಅದೇನಾಯಿತೋ ಗೊತ್ತಿಲ್ಲ. ಸ್ಟಾರ್ಕ್‌, ಹರ್ಷಿತ್‌ರ ಬೆಂಕಿ ಉಂಡೆಗಳನ್ನು ಎದುರಿಸಲಾಗದ ಸನ್‌ ಅಕ್ಷರಶಃ ತತ್ತರಿಸಿತು. 2ನೇ ಓವರಲ್ಲೇ ಅಭಿಷೇಕ್‌(02), ಟ್ರ್ಯಾವಿಸ್‌ ಹೆಡ್(00) ವಿಕೆಟ್‌ ಬಿದ್ದಾಗಲೇ ತಂಡದ ಅವನತಿಯ ಮುನ್ಸೂಚನೆ ಸಿಕ್ಕಿತ್ತು. ಬಳಿಕ ತ್ರಿಪಾಠಿ(09), ಮಾರ್ಕ್‌ರಮ್‌(20), ನಿತೀಶ್‌ ರೆಡ್ಡಿ(13), ಶಾಬಾಜ್‌(09), ಸಮದ್‌(04)...ಹೀಗೆ ಬಂದವರೆಲ್ಲಾ ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ಮರಳಿದರು. ಕ್ಲಾಸೆನ್‌ 16, ಕಮಿನ್ಸ್‌ 24 ರನ್‌ ಸಿಡಿಸಿದ್ದರಿಂದ ತಂಡ 100ರ ಗಡಿ ದಾಟಿತು. ರಸೆಲ್‌ 19ಕ್ಕೆ 3, ಮಿಚೆಲ್‌ ಸ್ಟಾರ್ಕ್‌, ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಕಬಳಿಸಿದರು.