ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಇತಿಹಾಸದಲ್ಲೇ ಬ್ಯಾಡ್ಮಿಂಟನ್ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಂಡಿರುವ ಲಕ್ಷ್ಯ ಸೇನ್, ಭಾನುವಾರ ಅಂತಿಮ 4ರ ಸುತ್ತಿನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ ಸೆಣಸಾಡಲಿದ್ದಾರೆ. ಇದರಲ್ಲಿ ಗೆದ್ದರೆ ಸೇನ್‌ಗೆ ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಲಿದ್ದು, ಸೋತರೆ ಕಂಚಿನ ಪದಕಕ್ಕಾಗಿ ಆಡಬೇಕಿದೆ.
22 ವರ್ಷದ ಸೇನ್ ಶುಕ್ರವಾರ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯ ಚೊಯು ಟೀನ್ ಚೆನ್ ವಿರುದ್ಧ ಗೆದ್ದಿದ್ದರು. ಆದರೆ ಸೆಮೀಸ್‌ನಲ್ಲಿ ಅವರಿಗೆ 2 ಒಲಿಂಪಿಕ್ಸ್ ಪದಕ ವಿಜೇತ, 2 ಬಾರಿ ವಿಶ್ವ ಚಾಂಪಿಯನ್ ಆಗಿರುವ ವಿಶ್ವ ನಂ.1 ವಿಕ್ಟರ್ ವಿರುದ್ಧ ಕಠಿಣ ಸವಾಲು ಎದುರಾಗಲಿದೆ. ಈ ವರೆಗೂ ಉಭಯ ಆಟಗಾರರ ನಡುವೆ 8 ಪಂದ್ಯಗಳು ನಡೆದಿದ್ದು, ಸೇನ್ ಒಮ್ಮೆ ಮಾತ್ರ ಗೆದ್ದಿದ್ದಾರೆ.
ಶಾಟ್ ಪುಟ್: ಫೈನಲ್ ಪ್ರವೇಶಿಸದ ತಜೀಂದರ್
ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತೀಯರ ನೀರಸ ಪ್ರದರ್ಶನ ಮುಂದುವರಿದಿದೆ. 2 ಬಾರಿ ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಭಾರತದ ತಾರಾ ಅಥ್ಲೀಟ್ ತಜೀಂದರ್‌ಪಾಲ್ ಸಿಂಗ್ ತೂರ್, ಶುಕ್ರವಾರ ಪುರುಷರ ವಿಭಾಗದ ಶಾಟ್‌ಪುಟ್‌ನ ಅರ್ಹತಾ ಸುತ್ತಿನಲ್ಲೇ ಸೋತು ಹೊರಬಿದ್ದರು. ಅವರು ‘ಎ’ ಗುಂಪಿನಲ್ಲಿ 18.05 ಮೀ. ದೂರಕ್ಕೆ ಶಾಟ್‌ಪುಟ್ ಎಸೆದು 15ನೇ ಸ್ಥಾನ ಪಡೆದುಕೊಂಡರು. ಒಟ್ಟಾರೆ 31 ಸ್ಪರ್ಧಿಗಳ ಪೈಕಿ 29ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಫೈನಲ್ ಪ್ರವೇಶಿಸಲು 21.35 ಮೀ. ದೂರಕ್ಕೆ ಶಾಟ್‌ಪುಟ್ ಎಸೆಯಬೇಕಿತ್ತು ಅಥವಾ ಒಟ್ಟಾರೆ ಅಗ್ರ-12ರಲ್ಲಿ ಸ್ಥಾನ ಪಡೆಯಬೇಕಿತ್ತು.