ಸಾರಾಂಶ
ನ್ಯೂಪೋರ್ಟ್(ಅಮೆರಿಕ): ಭಾರತದ ದಿಗ್ಗಜ ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ವಿಜಯ್ ಅಮೃತರಾಜ್ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್‌ಗೆ ಭಾನುವಾರ ಸೇರ್ಪಡೆಯಾದರು. ಈ ಮೂಲಕ ಏಷ್ಯಾದಿಂದ ಈ ಗೌರವ ಪಡೆದ ಮೊದಲಿಗರು ಎಂಬ ಖ್ಯಾತಿ ಪಡೆದಿದ್ದಾರೆ.
1996ರ ಅಟ್ಲಾಂಟಾ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್ ಕಂಚು, ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ 8 ಪುರುಷರ ಡಬಲ್ಸ್, 10 ಮಿಶ್ರ ಡಬಲ್ಸ್ ಕಿರೀಟ ಪ್ರಸಿದ್ಧ ಗೆದ್ದಿರುವ 51 ವರ್ಷದ ಪೇಸ್ ‘ಆಟಗಾರ’ ವಿಭಾಗದಲ್ಲಿ ಹಾಲ್ ಆಫ್ ಫೇಮ್ ಸೇರ್ಪಡೆಗೊಂಡರು. ಮತ್ತೊಂದೆಡೆ ಗ್ರ್ಯಾನ್‌ಸ್ಲಾಂ ಹಾಗೂ ಡೇವಿಸ್ ಕಪ್‌ಗಳಲ್ಲಿ ಮಹತ್ವದ ಸಾಧನೆ ಮಾಡಿರುವ 70 ವರ್ಷದ ವಿಜಯ್ ಅವರು ‘ಕಾಂಟ್ರಿಬ್ಯೂಟರ್’ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾದರು. ಅಮೃತರಾಜ್ ವಿಂಬಲ್ಡನ್, ಯುಎಸ್ ಓಪನ್‌ನಲ್ಲಿ ತಲಾ 2 ಬಾರಿ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಅಲ್ಲದೆ 1974, 1987 ರಲ್ಲಿ ಭಾರತ ತಂಡವನ್ನು 2 ಬಾರಿ ಡೇವಿಸ್ ಕಪ್ ಫೈನಲ್‌ಗೇರಿಸಿದ್ದಾರೆ.
ಭಾಂಬ್ರಿ ಸ್ವಿಸ್ ಓಪನ್ ಡಬಲ್ಸ್‌ನಲ್ಲಿ ಚಾಂಪಿಯನ್
ಸ್ಟಾಡ್(ಸ್ವಿಜರ್‌ಲೆಂಡ್): ಭಾರತದ ತಾರಾ ಟೆನಿಸಿಗ ಯೂಕಿ ಭಾಂಬ್ರಿ ಸ್ವಿಸ್ ಓಪನ್ ಎಟಿಪಿ 250 ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಕಣಕ್ಕಿಳಿದಿದ್ದ ಭಾಂಬ್ರಿ, ಫೈನಲ್‌ನಲ್ಲಿ ಫ್ರಾನ್ಸ್‌ನ ಯುಗೊ ಹಂಬರ್ಟ್-ಫ್ರಾಬ್ರಿಕ್ ಮಾರ್ಟಿನ್ ವಿರುದ್ಧ 3-6, 6-3, 10-6 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇದರೊಂದಿಗೆ 32 ವರ್ಷದ ಭಾಂಬ್ರಿ ತಮ್ಮ ಟೆನಿಸ್ ವೃತ್ತಿ ಜೀವನದ 3ನೇ ಎಟಿಪಿ ಟ್ರೋಫಿ ಮುಡಿಗೇರಿಸಿಕೊಂಡರು. 2023ರಲ್ಲಿ ದ.ಆಫ್ರಿಕಾದ ಲಾಯ್ಡ್ ಹ್ಯಾರಿಸ್ ಜೊತೆಗೂಡಿ ಮಲೋರ್ಕಾ ಚಾಂಪಿಯನ್‌ಶಿಪ್ ಹಾಗೂ 2024ರಲ್ಲಿ ಒಲಿವೆಟ್ಟಿ ಜೊತೆಗೂಡಿ ಬಿಎಂಡಬ್ಲ್ಯುಓಪನ್ ಪ್ರಶಸ್ತಿ ಗೆದ್ದಿದ್ದರು.